ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷಗಾನ ಕಲಿಕೆಯು ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪ ಇಂತಹ ಯಕ್ಷಗಾನವನ್ನು ಮಕ್ಕಳಿಗೆ ಕಲಿಸುವುದರಿಂದ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳನ್ನು ಕಾಣಿಕೆಯಾಗಿ ನೀಡಬಹುದಾಗಿದೆ ಎಂದು ಯಕ್ಷಗಾನ ಕಲಾಕೇಂದ್ರ ಹಂಗರಕಟ್ಟೆಯ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಅಭಿಪ್ರಾಯಪಟ್ಟರು.
ಅವರು ಇತ್ತೀಚಿಗೆ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆ, ವಿವೇಕ ಪದವಿಪೂರ್ವ ಕಾಲೇಜು ಹೈಸ್ಕೂಲ್ ವಿಭಾಗ, ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ನಡೆದ ಯಕ್ಷ ಶಿಕ್ಷಣ ಟ್ರಸ್ಟ್, ಉಡುಪಿ ಇವರು ಏರ್ಪಡಿಸುವ ಯಕ್ಷಗಾನ ತರಬೇತಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್ ಅವರು ಯಕ್ಷ ಶಿಕ್ಷಣ ಟ್ರಸ್ಟ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಸ್ಥೂಲ ಪರಿಚಯ ನೀಡಿ ವಿದ್ಯಾರ್ಥಿಗಳು ಇದರಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.
ವಿವೇಕ ಪದವಿಪೂರ್ವ ಕಾಲೇಜಿನ ಹಿಂದಿನ ವಿದ್ಯಾರ್ಥಿಯಾದ ಎಸ್ ವಿಶ್ವೇಶ್ವರ ಭಟ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ವಿಕಾಸಕ್ಕೆ ಪೂರಕವಾಗಿದೆ ಹಾಗೂ ಇದೇ ಧ್ಯೇಯ ವಾಕ್ಯದೊಂದಿಗೆ ನಮ್ಮ ಸಂಸ್ಥೆ ನಡೆದು ಬಂದಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮೂರು ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನು ಒದಗಿಸುತ್ತಿರುವ ನರಸಿಂಹ ತುಂಗರನ್ನು ಗೌರವಿಸಲಾಯಿತು.
ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪ್ರೀತಿರೇಖಾ ಉಪಸ್ಥಿತಿಯಲ್ಲಿ ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ ಉಡುಪ ಸ್ವಾಗತಿಸಿದರೆ, ವಿವೇಕ ಪದವಿ ಪೂರ್ವ ಕಾಲೇಜು, ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕರಾದ ಪ್ರೇಮಾನಂದ ಧನ್ಯವಾದಗೈದರು. ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ಯಕ್ಷಗಾನಪೂರ್ವ ರಂಗದ ಬಾಲ ಗೋಪಾಲದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಶಿಕ್ಷಕಿ ಮಹಾಲಕ್ಷ್ಮಿಎಂಪಿ ನಿರೂಪಿಸಿದರು.

















