ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ, ಬ್ರಹ್ಮಾವರ ಇವರ ಆಶ್ರಯದಲ್ಲಿ ವಸ್ತ್ರ ಚಿತ್ರ ಕಲಾ ಲಘು ಉದ್ಯಮಿ (ಎಂಬ್ರಾಯ್ಡರಿ )ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಟೈಲರಿಂಗ್ ಅಸೋಸಿಯೇಷನ್‌ನ ಉಡುಪಿ ಜಿಲ್ಲಾಧ್ಯಕರು ಹಾಗೂ ಮಾಲಕರು, ಔಟ್ ಫಿಟ್ ಲೇಡೀಸ್ ಟೈಲರ್ ದಯಾನಂದ ಕೋಟ್ಯಾನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಮಹಿಳೆಯರು ತಮ್ಮ ಆಸಕ್ತಿಯ ಕ್ಷೇತ್ರವಾಗಿರುವ ಟೈಲರಿಂಗ್ ಹಾಗೂ ಎಂಬ್ರಾಯ್ಡರಿ ಉದ್ಯಮವು ಅತ್ಯಂತ ಲಾಭದಾಯಕ ಹಾಗೂ ಬಹಳ ಬೇಡಿಕೆಯಿರುವ ಕ್ಷೇತ್ರವಾಗಿದೆ. ಇದರಿಂದ ಮಹಿಳೆಯರಿಗೆ ಸ್ವ ಉದ್ಯೋಗವನ್ನು ಕೈಗೊಂಡು ಆರ್ಥಿಕವಾಗಿ ಸಬಲತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಸ್ವಾಭಿಮಾನದಿಂದ ಬದುಕಲು ಪ್ರೇರಣೆ ನೀಡುತ್ತದೆ.
ಇನ್ನೊಬ್ಬರ ಮುಂದೆ ನಿಂತು ಕೈ ಚಾಚುವ ಪ್ರಮೇಯ ತಪ್ಪುತ್ತದೆ. ಹಾಗಾಗಿ ಸ್ವ ಉದ್ಯೋಗ ಆರ್ಥಿಕ ಭದ್ರತೆ ಜೊತೆಗೆ ಆತ್ಮವಿಶ್ವಾಸದ ಕೊಂಡಿಯಾಗಲಿದೆ ಎಂದರು. ಸಮಾಜದಲ್ಲಿ ಗೌರವಯುತವಾದ ಸ್ಥಾನ ಮಾನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಯುವ ಜನತೆಗೆ ಸ್ವ ಉದ್ಯೋಗವನ್ನು ಪ್ರಾರಂಭಿಸಲು ಸಂಸ್ಥೆ ನೆರವಾಗ್ತಿದೆ. ಒಂದು ತಿಂಗಳು ತಮ್ಮ ಇತರೆ ಕೆಲಸಗಳನ್ನು ಬದಿಗಿರಿಸಿ, ಸಂಸ್ಥೆಯು ನೀಡುವ ತರಬೇತಿಯನ್ನು ಉತ್ತಮ ರೀತಿಯಲ್ಲಿ ಪಡೆದು ಯಶಸ್ವಿ ಉದ್ಯಮಗಳಾಗಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಸಂತೋಷ್ ಶೆಟ್ಟಿ, ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸಂಸ್ಥೆಯಲ್ಲಿ ಸಿಗುವ ತರಬೇತಿಯನ್ನು ಶ್ರದ್ಧೆಯಿಂದ ಪಡೆದುಕೊಂಡು, ಇಲ್ಲಿನ ಸವಲತ್ತುಗಳನ್ನು ನಿಮ್ಮ ಪ್ರೀತಿಪಾತ್ರರಲಿ ಹಂಚಿಕೊಂಡು ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸೋಣ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಚೈತ್ರ ಕೆ. ನಿರೂಪಿಸಿ, ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕ ರವಿ ವಂದಿಸಿದರು.

















