ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುತ್ ಸುರಕ್ಷತಾ ಸಪ್ತಾಹದ ಅಂಗವಾಗಿ ಮೆಸ್ಕಾಂ ಸಂಸ್ಥೆಯ ಸಹಯೋಗದೊಂದಿಗೆ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಾಗಾರವನ್ನು ಗುರುವಾರ ನಡೆಸಲಾಯಿತು.
ಮೆಸ್ಕಾಂ ತಲ್ಲೂರಿನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುರೇಶ್ ಬಾಬು ಅವರು ಮಳೆಗಾಲದ ಆರಂಭದಲ್ಲಿ ವಿದ್ಯುತ್ ಅವಘಡಗಳ ಸಂಭವ ಬಹಳವಾಗಿರುವುದರಿಂದ ಮಕ್ಕಳಲ್ಲಿ ಸುರಕ್ಷತೆಯ ಜ್ಞಾನ ಅತ್ಯಗತ್ಯ. ಎನ್ನುತ್ತಾ ಅಸುರಕ್ಷಿತವಾದ ವಿದ್ಯುತ್ ಸಂಪರ್ಕದಿಂದ ಪ್ರಾಣಾಪಾಯದ ಸನ್ನಿವೇಶಗಳ ಮಾಹಿತಿಯನ್ನು ವೀಡಿಯೋ ತುಣುಕುಗಳ ಜೊತೆಗೆ ನೀಡಿದರು.
ಮೆಸ್ಕಾಂ ತಲ್ಲೂರಿನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರೀಶ ಕುಮಾರ್ ಮಕ್ಕಳನ್ನು ಕುರಿತು ವಿದ್ಯುತ್ ಉತ್ಪತ್ತಿ, ಅದನ್ನು ಮನೆ ಮನೆಗೂ ತಲುಪಿಸುವ ವಿಚಾರಗಳ ಬಗ್ಗೆ ಮಾಹಿತಿ ನೀಡುವ ವೀಡಿಯೋ ತುಣುಕು ಮತ್ತು ಛಾಯಾಚಿತ್ರಗಳ, ಪ್ರತಿಕೃತಿಗಳ ಮೂಲಕ ತಿಳಿಸುತ್ತಾ ಮಕ್ಕಳೇ, ವಿದ್ಯುತ್ ತಂತಿಗಳ ಕೆಳಗೆ ಗಾಳಿಪಟಗಳ ಜೊತೆ ಆಡಬೇಡಿ. ತುಂಡಾಗಿ ಬಿದ್ದ ಲೈನ್ ಅನ್ನು ಯಾವತ್ತೂ ಮುಟ್ಟಬೇಡಿರಿ. 1912 ಸಂಖ್ಯೆಗೆ ನಿಮ್ಮ ವಿದ್ಯುತ್ ಸಮಸ್ಯೆಗಳನ್ನು ಹೇಳಿಕೊಳ್ಳಿರಿ. ತಕ್ಷಣವೇ ಮೆಸ್ಕಾಂ ಸಂಸ್ಥೆ ನಿಮ್ಮ ಸಹಕಾರಕ್ಕೆ ಬರುತ್ತದೆ. ಎನ್ನುತ್ತಾ ತಮ್ಮ ಕಾರ್ಯಚಟುವಟಿಕೆಯ ಕ್ಷೇತ್ರಗಳನ್ನು ವೀಡಿಯೋ ತುಣುಕುಗಳ ಮೂಲಕ ಪರಿಚಯಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಹಾಗೆಯೇ ಶ್ರೀ ಸಿದ್ಧಿವಿನಾಯಕ ವಸತಿಶಾಲೆ ಈಗ ಸೋಲಾರ್ ಮೂಲಕ ವಿದ್ಯುತ್ ಉತ್ಪಾದನಾ ಕೇಂದ್ರವಾಗಿ ಸಹಕರಿಸುತ್ತಿರುವ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಕಾರ್ಯಕ್ರಮದ ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡಿ, ವಿದ್ಯುತ್ ಇಲ್ಲದಿದ್ದರೆ ನಮ್ಮ ಮನೆ ಕತ್ತಲು, ವಿದ್ಯುತ್ ಸುರಕ್ಷತೆಯ ಕ್ರಮಗಳು ತಿಳಿಯದಿದ್ದರೂ ನಮ್ಮ ಮನೆ ಕತ್ತಲಾಗುವುದು. ಆದ್ದರಿಂದ ಸುರಕ್ಷತಾಕ್ರಮಗಳನ್ನು ಪ್ರತಿಯೊಬ್ಬರೂ ಅರಿಯಬೇಕು. ಅನಗತ್ಯವಾಗಿ ವಿದ್ಯುತ್ ಪೋಲಾಗುವುದನ್ನು ತಪ್ಪಿಸಿ. ವ್ಯರ್ಥವಾಗಿ ದೀಪ, ಪ್ಯಾನ್ ಗಳನ್ನು ಬಳಸಬೇಡಿ ಎಂದು ಮಕ್ಕಳಿಗೆ ತಿಳಿಸುತ್ತಾ, ಅತಿಥಿಗಳಿಗೆ ಗೌರವಗಳನ್ನು ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಮೆಸ್ಕಾಂನ ವಿವಿಧ ಪದಾಧಿಕಾರಿಗಳು, ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶುಭಾಂಗಿ ಕಾರ್ಯಕ್ರಮವನ್ನು ನಿರ್ವಹಿಸಿ, ಧನ್ಯವಾದಗಳನ್ನು ಅರ್ಪಿಸಿದರು.
















