ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಐಎಂಜೆ ಸಂಸ್ಥೆಗಳ ವತಿಯಿಂದ “ಭಾರತದ ವೈಜ್ಞಾನಿಕ ಪರಂಪರೆ” (Scientific Heritage of India) ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐಐಟಿ ಕಾನ್ಪುರದಿಂದ ಪಿಎಚ್.ಡಿ. ಪದವಿ ಪಡೆದ ಹಿರಿಯ ಶಿಕ್ಷಣತಜ್ಞರು ಹಾಗೂ ಭಾರತೀಯ ಇತಿಹಾಸ, ತತ್ವಶಾಸ್ತ್ರ ಮತ್ತು ವೈಜ್ಞಾನಿಕ ಪರಂಪರೆಯ ಅಧ್ಯಯನಕಾರರಾಗಿದ್ದ ಡಾ. ಪಿ. ಸುಬ್ಬಣ್ಣ ಭಟ್ ಅವರು ಈ ವಿಷಯದ ಕುರಿತು ಅತ್ಯಂತ ಮನೋಜ್ಞ ಉಪನ್ಯಾಸ ನೀಡಿದರು.
ತಮ್ಮ ಉಪನ್ಯಾಸದಲ್ಲಿ ಭಾರತವೇ ಜಗತ್ತಿಗೆ ಸಂಖ್ಯಾ ಪದ್ಧತಿಯನ್ನು ನೀಡಿದ ಏಕೈಕ ದೇಶ ಎಂಬ ಐತಿಹಾಸಿಕ ಸತ್ಯವನ್ನು ಅವರು ಒತ್ತಿ ಹೇಳಿದರು. ಪ್ರಾಚೀನ ಭಾರತೀಯ ಗಣಿತಜ್ಞರಾದ ಆರ್ಯಭಟ ಮತ್ತು ಭಾಸ್ಕರಾಚಾರ್ಯರು ಸಾವಿರಾರು ವರ್ಷಗಳ ಹಿಂದೆಯೇ ಸಂಕೀರ್ಣ ಗಣಿತ ಸಮಸ್ಯೆಗಳಿಗೆ ಅತ್ಯಂತ ನಿಖರವಾದ ಪರಿಹಾರಗಳನ್ನು ಕಂಡುಹಿಡಿದಿದ್ದರು ಎಂದು ವಿವರಿಸಿದರು.
ಖಗೋಳ ವಿಜ್ಞಾನದ ಕ್ಷೇತ್ರದಲ್ಲಿಯೂ ಪ್ರಾಚೀನ ಭಾರತೀಯರ ಸಾಧನೆಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದ ಅವರು, ಆಧುನಿಕ ವಿಜ್ಞಾನ ಉದಯಿಸುವುದಕ್ಕೂ ಮುನ್ನವೇ ಭಾರತೀಯರು ಗ್ರಹಗಳ ಚಲನೆ, ಗ್ರಹಣಗಳ ಲೆಕ್ಕಾಚಾರ ಹಾಗೂ ಕಾಲಗಣನೆಯಲ್ಲಿ ಅಪೂರ್ವ ಪರಿಣತಿಯನ್ನು ಹೊಂದಿದ್ದರು ಎಂದು ತಿಳಿಸಿದರು. ಭಾರತದ ವೈಜ್ಞಾನಿಕ ಪರಂಪರೆಯನ್ನು ವೈಜ್ಞಾನಿಕ ಹಾಗೂ ಐತಿಹಾಸಿಕ ದೃಷ್ಟಿಕೋನದಿಂದ ಅಧ್ಯಯನ ಮಾಡುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್. ಎನ್. ಭಟ್, ಎಂಐಟಿ ಕುಂದಾಪುರದ ಪ್ರಾಂಶುಪಾಲ ಹಾಗೂ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ, ವಿವಿಧ ಘಟಕ ಕಾಲೇಜುಗಳ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಉಪನ್ಯಾಸವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಭಾರತದ ವೈಜ್ಞಾನಿಕ ಪರಂಪರೆಯ ಕುರಿತು ಹೊಸ ಅರಿವು, ಕುತೂಹಲ ಮತ್ತು ಹೆಮ್ಮೆಯನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.











