ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಶಸ್ವಿ ವಿದ್ಯಾರ್ಥಿಯಾಗಲು ಕೇವಲ ಉತ್ತಮ ಅಂಕಗಳನ್ನು ಗಳಿಸುವುದು ಮಾತ್ರ ಸಾಕಾಗುವುದಿಲ್ಲ. ಸಮಯಪಾಲನೆ, ಶಿಸ್ತು, ಪ್ರಾಮಾಣಿಕತೆ, ಪರಿಶ್ರಮ, ಆತ್ಮವಿಶ್ವಾಸ ಹಾಗೂ ನಿರಂತರ ಕಲಿಯುವ ಮನೋಭಾವ ಇವುಗಳೂ ಅಷ್ಟೇ ಮುಖ್ಯ. ವೈಫಲ್ಯವನ್ನು ಎಂದಿಗೂ ಸೋಲು ಎಂದು ಭಾವಿಸಬೇಡಿ. ಪ್ರತಿಯೊಂದು ವೈಫಲ್ಯವೂ ಹೊಸ ಪಾಠವನ್ನು ಕಲಿಸುತ್ತದೆ. ಆತ್ಮವಿಶ್ವಾಸ, ಧೈರ್ಯ ಮತ್ತು ನಿರಂತರ ಪ್ರಯತ್ನ ಇದ್ದರೆ ಯಶಸ್ಸು ಖಂಡಿತ ನಿಮ್ಮದಾಗುತ್ತದೆ ಎಂದು ಕೋಟ ವಿವೇಕ ಪ್ರೌಢ ಶಾಲೆಯ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಹೇಳಿದರು.
ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಐಕ್ಯೂಎಸಿ ಘಟಕ ಹಮ್ಮಿಕೊಂಡ ‘ಪ್ರೇರಣಾ’ ಶಿಬಿರದಲ್ಲಿ ‘ಯಶಸ್ವಿ ವಿದ್ಯಾರ್ಥಿ ಜೀವನ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ದೀಪಿಕಾ ಜಿ., ಐಕ್ಯೂಎಸಿ ಸಹ ಸಂಯೋಜಕರಾದ ರಕ್ಷಿತ್ ರಾವ್ ಗುಜ್ಜಾಡಿ ಹಾಗೂ ಶೈಕ್ಷಣಿಕ ನಿಕಾಯಕರಾದ ತಿಮ್ಮಪ್ಪ ಡಿ.ಎಸ್. ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಗಣಕಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹರೀಶ್ ಕಾಂಚನ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೀತಿ ಶೆಟ್ಟಿ ವಂದಿಸಿದರು.
















