ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪಾಲಕರ ಶಿಕ್ಷಕರ ಮತ್ತು ಆಡಳಿತ ಮಂಡಳಿಯ ಸಮಾಲೋಚನ ಸಭೆಯು ಇತ್ತೀಚಿಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ನಿರ್ವಹಿಸಿದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್.ಟಿ ತಿಮ್ಮಪ್ಪನವರು ಮಾತನಾಡಿ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನವು ಪೋಷಕರ ಬೇಡಿಕೆಯಂತೆ ನೂತನವಾಗಿ ಸದ್ಯೋಜಾತ ವಸತಿ ನಿಲಯವನ್ನು ನಿರ್ಮಿಸಿದ್ದು, ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿಕೊಡುವ ಪ್ರಯತ್ನದಲ್ಲಿದ್ದೇವೆ. ಪೋಷಕರ ಮತ್ತು ವಿದ್ಯಾರ್ಥಿಗಳ ಸಹಕಾರಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ಶಾಲೆಯ ಊಟೋಪಚಾರವು ಇಲ್ಲಿನ ವಾತಾವರಣಕ್ಕೆ ಹೊಂದಿಕೆಯಾಗುವಂತಿದ್ದು, ಅತಿಖಾರ, ಉಪ್ಪು, ಸಿಹಿಗಳಿಂದ ಮುಕ್ತವಾಗಿದ್ದು, ಆರೋಗ್ಯದಾಯಕವಾಗಿದೆ. ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಯಾವ ಶಿಸ್ತನ್ನು ರೂಢಿಸಿಕೊಂಡಿರುವರೋ ಅದನ್ನು ಮನೆಯಲ್ಲೂ ಮುಂದುವರಿಸಲು ಪಾಲಕರು ಪ್ರೇರೇಪಿಸಬೇಕು. ಮಕ್ಕಳ ಪ್ರೀತಿಯನ್ನು ಉಳಿಸಿ, ಬೆಳೆಸಿಕೊಳ್ಳಿ ಎಂದು ಹಿತವಚನಗಳನ್ನಾಡುತ್ತಾ, ಶಾಲೆಯ ವಾರ್ಷಿಕಪತ್ರಿಕೆ ಜ್ಯೋತಿಷ್ಮತಿಯನ್ನು ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಶ್ರೀ ಸಿದ್ಧಿ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಶರಣ ಕುಮಾರ ಪೋಷಕರ ಅಹವಾಲುಗಳಿಗೆ ಸ್ಪಂದಿಸಿ, ಅವರಿಗೆ ಉತ್ತರಗಳನ್ನು ನೀಡುತ್ತಾ ಭಾರತದ ಭವಿಷ್ಯದ ರುವಾರಿಗಳಾಗಿರುವ ಮಕ್ಕಳನ್ನು ಸರಿಯಾಗಿ ಬೆಳೆಸಬೇಕಾದುದು ಪೋಷಕ ಮತ್ತು ಶಿಕ್ಷಕವೃಂದದ ಸಮಾನ ಜವಾಬ್ದಾರಿ. ರಥ ಸಾಗಬೇಕಾದರೆ ಚಕ್ರಗಳೆರಡು ಸಮಾನತೆಯಿಂದ ಕೂಡಿ ಸಮಾನವಾದ ವೇಗದಿಂದ ಕೂಡಿರಬೇಕಾಗುತ್ತದೆ. ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಅಧ್ಯಯನದ ಕ್ರಮಗಳು ದಿನದಿಂದ ದಿನಕ್ಕೆ ಬದಲಾಗುತ್ತಿವೆ. ನಾವೂ ಮುಂದುವರಿಯಬೇಕು. ಆಗಷ್ಟೇ ನಮ್ಮ ಮಕ್ಕಳು ಕಾಲಕ್ಕೆ ಯೋಗ್ಯರಾಗಿ ಬೆಳೆಯುತ್ತಾರೆ.
ದೇಶದ ಸಂಪತ್ತಾಗಿರುವ ಮಕ್ಕಳು ಸೋಲನ್ನು ಅನುಭವಿಸುವ ಮತ್ತು ಎದುರಿಸುವ ಮನಸ್ಥಿತಿಯನ್ನೂ ಹೊಂದಿರಬೇಕಾಗುತ್ತದೆ. ತರಕಾರಿ ಮತ್ತು ಬಿದಿರುಗಳಲ್ಲಿ ತರಕಾರಿ ಶೀಘ್ರವಾದ ಬೆಳೆಯಾದರೆ ಬಿದಿರು ನಿಧಾನವಾದ ಬೆಳೆ. ಬಿದಿರಿನಂತೆ ಮಕ್ಕಳ ಬೆಳವಣಿಗೆ. ಅವರನ್ನು ತಾಳ್ಮೆಯಿಂದ ತಿದ್ದಿ, ತೀಡಿ ಬೆಳೆಸಿದರೆ ಸಮಾಜದ ಸುದೃಢವಾದ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ. ಎನ್ನುತ್ತಾ ಪೋಷಕರಿಗೆ ಕೆಲವಷ್ಟು ಕಿವಿಮಾತುಗಳನ್ನಾಡಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಗೌರವವನ್ನು ಸ್ವೀಕರಿಸಿ, ಕರ್ನಾಟಕ ಬ್ಯಾಂಕ್‌ನ ಸಹಾಯಕ ಮಹಾವ್ಯವಸ್ಥಾಪಕರು ಮತ್ತು ಪ್ರಾದೇಶಿಕ ಮುಖ್ಯಸ್ಥರಾದ ರಮೇಶ ವೈದ್ಯ ಮಾತನಾಡಿ, ಕರ್ನಾಟಕ ಬ್ಯಾಂಕ್ ಸಮಾಜಮುಖಿಯಾದ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ತನ್ನ ಉಳಿತಾಯದ ಕೆಲವಷ್ಟು ಮೊತ್ತವನ್ನು ಸಮಾಜದ ಅಭಿವೃದ್ಧಿಗೆ ಬಳಸುತ್ತಿರುವುದು ಬ್ಯಾಂಕ್ ನ ಸಿಬ್ಬಂದಿಗಳಾದ ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಎನ್ನುತ್ತಾ, ಶಾಲೆಯ ಅಭಿವೃದ್ಧಿಗೆ 10ಲಕ್ಷ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಾಲಕರಾದ ಭರತ ಕುಮಾರ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಈ ಶಾಲೆಯಲ್ಲಿ ಕೇವಲ ಪಠ್ಯವಿಷಯಗಳನ್ನು ಕಲಿಯುವುದಿಲ್ಲ. ಜೀವನಕ್ಕೆ ಬೇಕಾಗುವ ಕ್ರೀಡೆ, ಸಂಸ್ಕೃತಿ, ಸಂಸ್ಕಾರಗಳನ್ನು ಅಭ್ಯಾಸ ಮಾಡಬೇಕು. ಎಂದೂ ಕ್ರೀಡೆ ವಿದ್ಯೆಗೆ ಅಡ್ಡಿಯಾಗಿಲ್ಲ. ಎಂದು ತಮ್ಮ ಮಗಳ ಉದಾಹರಣೆ ನೀಡುತ್ತಾ ತಿಳಿಸಿದರು.
ಪಿನ್ ಲ್ಯಾಂಡ್ ನ ಶಿಕ್ಷಣ ಪ್ರತಿನಿಧಿಯಾದ ರಾಹುಲ್ ಈಶ್ವರ್ ಮಾತನಾಡಿ, ಪಿನ್‌ಲ್ಯಾಂಡ್ ಎಂಬ ದೇಶ ಸಂತೋಷದಿಂದ ಇರುವವರ ದೇಶ. ಜಗತ್ತು ದಿನದಿಂದ ದಿನಕ್ಕೆ ಮುಂದುವರಿಯುತ್ತಿದೆ. ನಮ್ಮ ಮಕ್ಕಳು ಹೊಸ ಸಮಾಜಕ್ಕೆ ಯೋಗ್ಯರಾಗಿ ಬೆಳೆಯಬೇಕೇ ವಿನಃ ನಮ್ಮ ಹಿಂದಿನ ಸ್ಥಿತಿಯಲ್ಲಿದ್ದರೆ ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದುಳಿಯಬಹುದು. ಅದಕ್ಕಾಗಿಯೇ ಪ್ರಪಂಚದ ಬೇರೆ ಬೇರೆ ಕಡೆಗಳಿಂದ ಯೋಗ್ಯವಾದ ಕೆಲವಷ್ಟೇ ವಿದ್ಯಾರ್ಥಿಗಳಿಗೆ ಪಿನ್ ಲ್ಯಾಂಡ್ ನಲ್ಲಿ ಕೌಶಲಾಭಿವೃದ್ಧಿಗಾಗಿ ಒಂದು ಶಿಬಿರವನ್ನು ಆಯೋಜಿಸುತ್ತಿದ್ದೇವೆ. ಅದರಲ್ಲಿ ಈ ಶಾಲೆಯ ವಿದ್ಯಾರ್ಥಿಗಳಿಗೂ ಅವಕಾಶವಿದ್ದು, ಪೋಷಕರು ಈ ವಿಚಾರದಲ್ಲಿ ತಿಳಿಯಬೇಕು. ಎನ್ನುತ್ತಾ ಆ ಶಿಬಿರದ ವಿಚಾರಗಳನ್ನು ಎಳೆ ಎಳೆಯಾಗಿ ವಿವರಿಸಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎಸ್. ನಾರಾಯಣ ರಾವ್ ಅವರು ಮಕ್ಕಳ ವಿದ್ಯಾಭ್ಯಾಸದ ಕೌಶಲ ಬದಲಾಗುತ್ತಿದ್ದು, ಅದನ್ನು ಬಳಸಿಕೊಂಡು ಮಕ್ಕಳನ್ನು ಬೆಳೆಸಬೇಕು. ಮಕ್ಕಳಲ್ಲಿ ವಿನಯಗುಣವನ್ನು ಬಿತ್ತಬೇಕು. ಭಾರತೀಯ ತತ್ತ್ವಗಳನ್ನು ಮರೆಯದೇ ಮಕ್ಕಳನ್ನು ಭಾರತೀಯರಾಗಿ ಬೆಳೆಸಲು ಮರೆಯಬಾರದು. ಎಂದರು. ಶಾಲೆಯ ಕ್ರೀಡಾ ಶಿಕ್ಷಣ ಶಿಕ್ಷಕರಾದ ಶ್ರೀ ಕೃಷ್ಣ ಹುಳ್ಳಾಲ್ ಶಾಲೆಯ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ವೇದಿಕೆಯಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ, ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿಗಳಾದ ವೇದಮೂರ್ತಿ ಬಾಲಚಂದ್ರ ಭಟ್ಟರು, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ನಾರಾಯಣ ಶೆಟ್ಟಿ, ಶಾಲೆಯ ಆಡಳಿತಾಧಿಕಾರಿಗಳಾದ ವೀಣಾ ರಶ್ಮಿ ಎಂ. ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಶೈಕ್ಷಣಿಕ ಸಲಹೆಗಾರರಾದ ಸುಜಾತಾ ಸದಾರಾಮ್, ಮುಖ್ಯೋಪಾಧ್ಯಾಯಿನಿ ಹೇಮಮಾಲಿನೀ ಪೋಷಕ- ಶಿಕ್ಷಕ – ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯಾದ ಶಶಿಕಲಾ ಶೆಟ್ಟಿ ನಿರೂಪಿಸಿದರು. ಶಿಕ್ಷಕರಾದ ಜಯಂತ ಶ್ಯಾನುಭಾಗ್ ಸ್ವಾಗತಿಸಿ, ಶಿಕ್ಷಕಿ ರಂಜಿತಾ ವಂದಿಸಿದರು.
















