ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಇಂದಿನ ಕಾಲಘಟ್ಟದಲ್ಲಿ ಎಲ್ಲಿಯೂ ನಡೆಯದ ಅಪರೂಪದ ಪೂರ್ಣರಾತ್ರಿ ತಾಳಮದ್ದಳೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಸಾಕ್ಷಿಯಾಗಲಿದೆ. ನಾಗರಾಜ್ ಶೆಟ್ಟಿ ನೈಕಂಬ್ಳಿ ಅವರ ಸಂಯೋಜನೆಯಲ್ಲಿ ನಡೆಯುತ್ತಿರುವ *‘ಯಕ್ಷಸಂಕ್ರಾಂತಿ *ಯ ಮೂರನೇ ವರ್ಷದ ಕಾರ್ಯಕ್ರಮವು ಜುಲೈ 25, ಶನಿವಾರ ರಾತ್ರಿ 10ರಿಂದ ಬೆಳಗಿನವರೆಗೆ ನಡೆಯಲಿದೆ.
ಇತ್ತೀಚಿನ ದಿನಗಳಲ್ಲಿ ಸಮಯದ ಮಿತಿಯೊಳಗೆ ನಡೆಯುವ ತಾಳಮದ್ದಳೆಗಳ ನಡುವೆ, ಇಡೀ ರಾತ್ರಿ ಅರ್ಥವೈಭವವನ್ನು ಆಸ್ವಾದಿಸುವ ಅವಕಾಶವನ್ನು ಕಲಾರಸಿಕರಿಗೆ ಕಲ್ಪಿಸುತ್ತಿರುವ ‘ನೈಕಂಬ್ಳಿ ಯಕ್ಷಸಂಕ್ರಾಂತಿ’ಈಗಾಗಲೇ ವಿಶಿಷ್ಟ ಗುರುತನ್ನು ಪಡೆದುಕೊಂಡಿದೆ. ರಾಜ್ಯದ ವಿವಿಧ ಭಾಗಗಳಿಂದ ಯಕ್ಷಗಾನಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಇದು ತಾಳಮದ್ದಳೆ ಪ್ರಿಯರ ವಾರ್ಷಿಕ ಸಾಂಸ್ಕೃತಿಕ ಹಬ್ಬವಾಗಿ ರೂಪುಗೊಂಡಿದೆ.
ಈ ತಾಳಮದ್ದಳೆಯ ಮೊದಲ ಪ್ರಸಂಗವಾಗಿ ಪಾರ್ತಿಸುಬ್ಬ ವಿರಚಿತ ‘ವಾಲಿವಧೆ’ ಹಾಗೂ ಎರಡನೇ ಪ್ರಸಂಗವಾಗಿ ಡಿ. ಎಸ್. ಶ್ರೀಧರರು ರಚಿಸಿದ ‘ಭೃಗುಶಾಪ’ ಪ್ರದರ್ಶನಗೊಳ್ಳಲಿವೆ.
ಪ್ರಸಿದ್ಧ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ಹಿಲ್ಲೂರು ರಾಮಕೃಷ್ಣ ಹೆಗಡೆ ಅವರ ಭಾಗವತಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
*‘ವಾಲಿವಧೆ’*ಯಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಶ್ರೀರಾಮನಾಗಿ, ಮಧೂರು ವಾಸುದೇವ ರಂಗಾಭಟ್ಟರು ವಾಲಿಯಾಗಿ ಹಾಗೂ ವಿದ್ವಾನ್ ಸಂಕದಗುಂಡಿ ಗಣಪತಿ ಭಟ್ಟರು ಸುಗ್ರೀವನಾಗಿ ಅರ್ಥವೈಭವ ಅನಾವರಣಗೊಳಿಸಲಿದ್ದಾರೆ.
*‘ಭೃಗುಶಾಪ’*ದಲ್ಲಿ ಸಂಪಾಜೆ ಜಬ್ಬಾರ್ ಸಮೊರರು ತಮಾಸುರನಾಗಿ, ಗಣೇಶ ಶೆಟ್ಟಿ ಕನ್ನಡಿಕಟ್ಟೆ ದೇವೇಂದ್ರನಾಗಿ, ವಿದ್ವಾನ್ ಸಂಕದಗುಂಡಿ ಗಣಪತಿ ಭಟ್ಟರು ಖ್ಯಾತಿಯಾಗಿ, ಸುನಿಲ್ ಕುಮಾರ್ ಹೊಲಾಡು ಭೃಗುವಾಗಿ, ಸುರೇಶ್ ಶೆಟ್ಟಿ ನಂದ್ರೊಳ್ಳಿ ವಿಷ್ಣುವಾಗಿ ಹಾಗೂ ಮನು ಹಂದಾಡಿ ಬೃಹಸ್ಪತಿಯಾಗಿ ಭಾಗವಹಿಸಲಿದ್ದಾರೆ. ಮದ್ದಳೆಯಲ್ಲಿ ಎಪಿ ಪಾಠಕ್, ಅಕ್ಷಯ್ ಆಚಾರ್ಯ, ಶಶಾಂಕ್ ಆಚಾರ್ಯ, ಶ್ರೀನಿವಾಸ ಪ್ರಭು, ಪ್ರಜ್ವಲ್ ಮುಂಡಾಡಿ ಅವರು ಭಾಗವಹಿಸಲಿದ್ದಾರೆ.
ಇಡೀ ರಾತ್ರಿ ನಡೆಯುವ ಈ ಅಪರೂಪದ ಅರ್ಥವೈಭವದ ಶ್ರವಣಾನುಭವವನ್ನು ಯಕ್ಷಗಾನಾಭಿಮಾನಿಗಳು ತಪ್ಪದೆ ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರಾದ ನಾಗರಾಜ್ ಶೆಟ್ಟಿ ನೈಕಂಬ್ಳಿ 9741474255 ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ವಿವರಗಳು:
ಕಾರ್ಯಕ್ರಮ: ಯಕ್ಷಸಂಕ್ರಾಂತಿ – ಪೂರ್ಣರಾತ್ರಿ ತಾಳಮದ್ದಳೆ
ದಿನಾಂಕ: ಜುಲೈ 25, 2026 (ಶನಿವಾರ)
ಸಮಯ: ರಾತ್ರಿ 10ರಿಂದ ಬೆಳಗಿನವರೆಗೆ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
ಹೆಚ್ಚಿನ ಮಾಹಿತಿಗಾಗಿ:
ನಾಗರಾಜ್ ಶೆಟ್ಟಿ ನೈಕಂಬ್ಳಿ
9741474255
ಸಂಯೋಜಕರು – ಯಕ್ಷಸಂಕ್ರಾಂತಿ
















