ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ‘ವಿದ್ಯಾರ್ಥಿ ಜೀವನದ ಸವಾಲುಗಳು-ಪರಿಹಾರಗಳು’ ಎಂಬ ವಿಷಯದಡಿ ಕಾರ್ಯಾಗಾರ ನಡೆಯಿತು..
ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಲಿಯುವುದು ಒಂದು ಸವಾಲಾದರೆ ಕಲಿಯಲೇಬೇಕು ಎಂಬುದು ಅದಕ್ಕೆ ಉತ್ತರ. 25 ವರ್ಷ ನೀವು ಕಷ್ಟಪಟ್ಟರೆ ಮುಂದಿನ 75 ವರ್ಷ ಸುಖವಾಗಿ ಬಾಳಬಹುದು. ಜೀವನದಲ್ಲಿ ಉತ್ತಮ ಗುರಿಯ ಜೊತೆಗೆ ಗುರಿ ತಲುಪುವಲ್ಲಿ ಆಯ್ಕೆ ಮಾಡಿಕೊಂಡ ಮಾರ್ಗ ಉತ್ತಮವಾಗಿರಬೇಕು. ಸಮಯ ಪಾಲನೆ, ವೈಯಕ್ತಿಕ ವೇಳಾಪಟ್ಟಿ, ಉತ್ತಮ ಸ್ನೇಹಿತರ ಆಯ್ಕೆ, ಸ್ವಚ್ಛತೆ, ವ್ಯಾಯಾಮ, ಶಕ್ತಿಯುತ ಆರೋಗ್ಯಕರ ಶರೀರ ಮುಂತಾದ ವಿಷಯಗಳ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ಅಜ್ಞಾನದ ಆಕರ್ಷಣೆಗೆ ಒಳಗಾಗದೆ, ಆಷಾಢಭೂತಿ ವ್ಯಕ್ತಿತ್ವ ಬಿಡಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದ ಅದ್ಭುತ ಕಾಲಘಟ್ಟ, ಪಠ್ಯ ವಿಷಯಗಳನ್ನು ತಿಳಿಯುವುದರ ಜೊತೆಗೆ ಅದು ಚಾರಿತ್ರ್ಯ ನಿರ್ಮಾಣ ಮಾಡಿಕೊಳ್ಳುವ ಕಾಲ, ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಶ್ರದ್ದೆ, ಪರಿಶ್ರಮ, ಗುರಿ ಮತ್ತು ಬದ್ಧತೆ ಇದ್ದರೆ ಯಾವುದೇ ಸವಾಲುಗಳನ್ನು ಗೆಲ್ಲಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ .ರಾಧಾಕೃಷ್ಣ ಶೆಣೈ ಅವರು ದೀಪ ಪ್ರಜ್ವಲಿಸಿ, ಅಧ್ಯಕ್ಷೀಯ ಮಾತುಗಳನ್ನಾಡಿದರು.
ಬಸ್ರೂರು ನಿವೃತ್ತ ಮುಖ್ಯ ಶಿಕ್ಷಕ ದಿನಕರ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಅಡಿಗ ಸ್ವಾಗತಿಸಿದರು. ರೇಖಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ನೇತ್ರಾವತಿ ವಂದಿಸಿದರು.
















