ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ.
ಕುಂದಗನ್ನಡವನ್ನು ಮತ್ತಷ್ಟು ಸಮೃದ್ಧಗೊಳಿಸುವ, ಜನರಿಗೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಪುಸ್ತಕ, ಸಾಹಿತ್ಯ, ಹಾಡು, ಸಿನೆಮಾ ಹೀಗೆ ಹತ್ತಾರು ಬಗೆಯಲ್ಲಿ ಕೆಲಸ ಮಾಡಿದವರು ಹತ್ತಾರು ಮಂದಿ. ಪ್ರತಿಭಾರಿಯೂ ಹೀಗೆ ನಡೆಯುವ ಹೊಸ ಹೊಸ ಪ್ರಯತ್ನಗಳನ್ನು ಮೆಚ್ಚುತ್ತಾ, ಪ್ರೋತ್ಸಾಹಿಸುತ್ತಾ ಬಂದವರು ಕುಂದನಾಡಿಗರು.
ಅಂತಹದ್ದೇ ಒಂದು ಭಾಷಾಭಿಮಾನದಿಂದ ಮೊದಲ ಭಾರಿಗೆ ಪಣ್ಕ್ ಮಕ್ಕಳ್ ತಂಡದ ಆಲ್ಬಂ ಬಿಡುಗಡೆಯಾದಾಗ, ಮೊಲದ ಭಾರಿಗೆ ಗರ್‌ಗರ್‌ಮಂಡ್ಲ ಎಂಬ ಕಮರ್ಶಿಯಲ್ ಸಿನೆಮಾ ಜನರ ಮುಂದೆ ಬಂದಾಗ ಮನತುಂಬಿ ಸ್ವಾಗತಿಸಿದ್ದ ಪ್ರೇಕ್ಷಕ ಸಮೂಹ ಈಗ ಬಿಡುಗಡೆಗೊಂಡಿರುವ ಕುಂದಾಪ್ರ ಕನ್ನಡದ ’ಬಿಲಿಂಡರ್’ ಸಿನೆಮಾವನ್ನೂ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ಸಿನೆಮಾ ಚನ್ನಾಗಿದೆ ಎಂದು ಜನರು ಸುಮ್ಮನೆ ಮೆಚ್ಚಿಕೊಂಡಿಲ್ಲ. ಒಂದು ಪ್ರಾದೇಶಿಕ ಭಾಷೆಯ ಸಿನೆಮಾ ಸ್ಯಾಂಡಲ್‌ವುಡ್‌ನ ಕಮರ್ಶಿಯಲ್ ಸಿನೆಮಾಗಳಿಗೆ ಸರಿಸಾಟಿಯಾಗಿ ನಿಲ್ಲಬಹುದು ಎಂಬ ಭರವಸೆಯನ್ನು ಹುಟ್ಟಿಹಾಕಿರುವುದು ಇದಕ್ಕೆ ಪ್ರಮುಖ ಕಾರಣ. ಒಟ್ಟಾರೆ ಕುಂದಾಪುರದಂತಹ ಪ್ರದೇಶವನ್ನು ಕೇಂದ್ರವನ್ನಾಗಿಟ್ಟುಕೊಂಡು ದೊಡ್ಡ ಮಟ್ಟದ ಸಿನೆಮಾ ತಯಾರಾಗುತ್ತದೆ, ಜನ ಸಿನೆಮಾ ಥಿಯೇಟರ್‌ನತ್ತ ಮುಖ ಮಾಡುತ್ತಾರೆ ಎಂದರೇ ಅದಕ್ಕೆ ಭಾಷೆಯ ಮೇಲಿನ ಪ್ರೀತಿ ಮಾತ್ರವೇ ಕಾರಣ ಎನ್ನುವುದನ್ನು ಯಾರೂ ತಳ್ಳಿಹಾಕುವಂತಿಲ್ಲ. /ಕುಂದಾಪ್ರ ಡಾಟ್ ಕಾಂ ಲೇಖನ
‘ಬಿಲಿಂಡರ್’ ಕಥೆ ಹೀಗೆ ಸಾಗುತ್ತೆ:
ಹೆತ್ತ ತಾಯಿಯ ಪ್ರೀತಿಯಿಂದ ವಂಚಿತನಾಗಿ ಅನಾಥನಾಗುವ ನಾಯಕ, ಸಾಕು ತಂದೆ ತಾಯಿಯ ಪ್ರೀತಿಯಲ್ಲಿ ಬೆಳೆಯುತ್ತಾನೆ. ಚಿಕ್ಕಂದಿನಿಂದಲೇ ತಾಯಿಯ ಆಸೆಯಂತೆ ಪೊಲೀಸ್ ಆಗಬೇಕೆಂಬ ಆತನ ಕನಸಿಗೆ ಹಣದ ಅಡಚಣೆ, ಪ್ರೇಯಸಿಯನ್ನು ಮದುವೆಯಾಗಬೇಕೆಂಬ ಇಂಗಿತಕ್ಕೂ ಹಣದ ಅಡಚಣೆ. ಹಣವಿಲ್ಲದೇ ಬದುಕಿಲ್ಲ ಎಂದು ನಿರ್ಣಯಕ್ಕೆ ಬರುವಾಗ ಖತಾರ್ನಾಕ್ ಯೋಚನೆಯೊಂದು ಹೊಳೆದು ಬದುಕು ಬದಲಿಸಬಲ್ಲದೆಂಬ ಆಲೋಚನೆ ಹುಟ್ಟಿಕೊಂಡಿತ್ತು. ಹಣ ಪಡೆಯುವಲ್ಲಿ ಸ್ಮಗ್ಲಿಂಗ್ ದಂಧೆಯಿಂದ ಎದುರಾಗುವ ಆಪತ್ತು. ಕೊನೆ ಹಂತದಲ್ಲಿ ಇದೆಲ್ಲವೂ ನಾಯಕ ಪೊಲೀಸ್ ಆಗಿದ್ದುಕೊಂಡೇ ಕಳ್ಳರನ್ನು ಬಲೆ ಬೀಳಿಸುವ ಸಲುವಾಗಿ ಹೆಣೆಯುಯುವ ಚಕ್ರವ್ಯೂಹ ಎಂದು ಚಿತ್ರದ ಟ್ವಿಸ್ಟ್ ಅರಿವಿಗೆ ಬರುತ್ತದೆ. ಇದು ಚಿತ್ರಕಥೆ ಸಾಗುವ ರೀತಿ. ಕೊನೆಯವರೆಗೂ ಚಿತ್ರ ಒಂದಿಷ್ಟು ಕುತೂಹಲವನ್ನು ಹಿಡಿದಿಟ್ಟುಕೊಂಡಿದೆ. /ಕುಂದಾಪ್ರ ಡಾಟ್ ಕಾಂ ಲೇಖನ
ತಾಯಿಯ ಮಮತೆ, ಸಾಕುತಂದೆ ತಾಯಿಯರ ಕಾಳಜಿ, ಪ್ರೇಮಾಲಾಪ, ಸಾಮಾನ್ಯನೊಬ್ಬನ ಬದುಕಿನಲ್ಲಿ ಎದುರಾಗುವ ಹಣದ ಅಡಚಣೆ, ಯಾವುದೇ ಮಾರ್ಗಗಳು ಕಾಣದಾದಾಗ ಹಿಡಿಯುವ ಅಡ್ಡದಾರಿ, ಇವೆಲ್ಲದರ ಮಧ್ಯೆ ಲಘು ಹಾಸ್ಯ, ಸ್ಟಂಟ್, ನೃತ್ಯ ಎಲ್ಲವೂ ಪ್ರೇಕ್ಷಕನನ್ನು ರಂಜಿಸುತ್ತದೆ.
ಚಿತ್ರದ ನಿರ್ದೇಶಕ ರವಿ ಬಸ್ರೂರ್ ಸ್ವತಃ ನಾಯಕನ ಪಾತ್ರದಲ್ಲಿ ಭಾಸ್ಕರನಾಗಿ ಕಾಣಿಸಿಕೊಂಡಿದ್ದು, ಆಂಗ್ರಿ ಯಂಗ್ ಮ್ಯಾನ್ ಆಗಿ ಖದರ್ ಲುಕ್ ನೀಡಿದ್ದಾರೆ. ಸಂಗೀತ ನಿರ್ದೇಕನಾಗಿ ತೆರೆಯ ಹಿಂದೆ ಮಿಂಚಿದ್ದ ರವಿ ಬಸ್ರೂರು, ತೆರೆಯ ಮೇಲೆ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ನಾಯಕಿ ಸವಿತಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶೀಜಾ ಶೆಟ್ಟಿ ಮೊದಲ ಭಾರಿಗೆ ತಮ್ಮ ಬೋಲ್ಡ್ ಅಭಿನಯದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ. ಸುರ್ಗೋಳಿ ಪಾಂಡುವಾಗಿ ರಘು ಪಾಂಡೇಶ್ವರ್ ಅವರು ಹಾಸ್ಯ ಚಿತ್ರದಲ್ಲಿ ಎಂದಿನಂತೆ ರಂಜಿಸಿದ್ದರೂ, ಹಾಸ್ಯನಟ ಪಾಂಡೇಶ್ವರ್ ಅಭಿನಯವನ್ನು ಹಿಂದಿನ ಸಿನೆಮಾದಲ್ಲಿ ಬಳಸಿಕೊಂಡಷ್ಟನ್ನು ಇಲ್ಲಿಯೂ ಬಳಸಿಕೊಂಡಿದ್ದರೇ ಮತ್ತಷ್ಟು ನಗಬಹುದಿತ್ತು ಎಂದೆನಿಸುತ್ತದೆ. ಮಾಸ್ ಮಾದನಾಗಿ ಕಾಣಿಕೊಂಡಿರುವ ಮಾಧವ ಕಾರ್ಕಡ ಮತ್ತವರ ತಂಡದ ಹಾಸ್ಯಾಭಿನಯ ಚಿತ್ರಮಂದಿರದಿಂದ ಹೊರಡುವವರೆಗೆ ನೆನಪಲ್ಲಿ ಉಳಿಯುತ್ತದೆ. ನಾಯಕನ ತಾಯಿ ಪ್ರತಿಮಾ ನಾಯಕ್ ಅವರಿಗಿಂತ, ಸಾಕು ತಾಯಿ ಸ್ವರಾಜ್ಯ ಲಕ್ಷ್ಮೀ ಹಾಗೂ ಸಾಕು ತಂದೆ ಪ್ರಭಾಕರ ಕುಂದರ್ ಅವರ ಪಾತ್ರ ಒಂದಿಷ್ಟು ಹೊತ್ತು ಭಾವುಕರನ್ನಾಗಿಸುತ್ತದೆ. ಇಡೀ ಚಿತ್ರದಲ್ಲಿ ಆವರಿಸಿಕೊಳ್ಳುವುದು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ದುಬೈ ಸೀನಾ ವಿಜಯ್ ಬಸ್ರೂರ್, ಬಾಟ್ಲಿ ಬಾಬು ಚಂದ್ರಶೇಖರ ಬಸ್ರೂರು ಹಾಗೂ ಓಂ ಗುರು ಬಳ್ಕೂರು ಅವರ ಅಭಿನಯ. ಹೈಬಜೆಟ್ ಚಿತ್ರದ ಯಾವ ವಿಲನ್‌ಗಳಿಗೂ ಕಮ್ಮಿಯಿಲ್ಲ ಎಂಬಂತೆ ಪ್ರಾದೇಶಿಕ ಭಾಷಾ ಶ್ರೀಮಂತಿಕೆಯನ್ನು ತುಂಬಿಕೊಂಡು ನಟಿಸಿದ್ದಾರೆ. ಚಿತ್ರದಲ್ಲಿ ರಂಬಾಳಾದ ಚಂದ್ರಕಲಾ ಕದಿಕೆ, ವಿಜಯೇಂದ್ರ ಪ್ರಸಾದ್ ಆದ ಗಡ್ಡ ವಿಜಿ, ಗೋಳಿಯಾಗಿ ನಾಗರಾಜ ಗೂಳಿ, ಮಹಾಬಲ ಶೆಟ್ಟಿಗಾರ್, ಭಾಸ್ಕರ್ ಆಚಾರ್, ಮುರಳಿಯಾದ ಕಿರಣ್ ಮತ್ತು ಇನ್ನಿತರ ಸಹನಟರುಗಳ, ಬಾಲನಟರ ಅಭಿನಯ ಮೆಚ್ಚುವಂತದ್ದು. /ಕುಂದಾಪ್ರ ಡಾಟ್ ಕಾಂ ಲೇಖನ
ಇನ್ನು ಕಥೆ, ಚಿತ್ರಕಥೆ, ಸಂಗೀತ, ಸಾಹಿತ್ಯ, ಎಲ್ಲದರಲ್ಲೂ ರವಿ ಬಸ್ರೂರ್ ಅವರದ್ದೇ ಕೈಚಳಕ. ಚಿತ್ರದ ಎಲ್ಲಾ ಹಾಡುಗಳು ಸುಂದರವಾಗಿ ಮೂಡಿಬಂದಿದ್ದು ಚಿತ್ರಬಿಡುಗಡೆಯ ಮುನ್ನವೇ ಅದು ಪ್ರೇಕ್ಷಕನ ಮನಗೆದ್ದಿದ್ದವು. ಪುನಿತ್ ರಾಜ್‌ಕುಮಾರ್ ಹಾಗೂ ಶ್ರೀಮುರಳಿ ಅವರ ಚಿತ್ರದ ಎರಡು ಹಾಡುಗಳಿಗೆ ಧ್ವನಿಯಾಗಿದ್ದು ಬಿಲಿಂಡರ್ ಚಿತ್ರಕ್ಕೆ ಮತ್ತಷ್ಟು ಬಲಬಂದಂತಾಗಿತ್ತು. ಒಟ್ಟಾರೆಯಾಗಿ ಸಿನೆಮಾ ಯಶಸ್ಸು ಕಂಡಿದೆ ಎಂದರೆ ಅದರ ಕ್ರೆಡಿಟ್ ಮೊದಲು ಸಲ್ಲಬೇಕಾದ್ದು ಸಚಿನ್ ಬಸ್ರೂರ್ ಅವರ ಕ್ಯಾಮರ್ ಕೈಚಳಕಕ್ಕೆ. ಚಿತ್ರದ ಪ್ರತಿ ಸೀನ್ ಮತ್ತು ಆಯ್ಕೆ ಮಾಡಿಕೊಂಡ ಲೊಕೇಶನ್‌ಗಳನ್ನು ಚನ್ನಾಗಿಯೇ ಸ್ಕ್ರೀನ್ ಮೇಲೆ ಮೂಡಿಸಿ ಒಂದು ಮಟ್ಟಿಗೆ ಸಿನೆಮಾವನ್ನು ರಿಚ್ ಆಗಿಸಿದ್ದಾರೆ. ದುಬೈ ಲೊಕೇಶನ್ ಮತ್ತು ಚಿತ್ರದ ಕೆಲವೊಂದು ದೃಷ್ಯಗಳು ಗ್ರೀನ್‌ರೂಂನಲ್ಲಿ ಚಿತ್ರಿಸಿ ನಿಜವೆಂಬಂತೆ ಎಡಿಟಿಂಗ್ ಮಾಡಿ ಚಾಕಚಕ್ಯತೆ ಮೆರೆದಿದ್ದಾರೆ. /ಕುಂದಾಪ್ರ ಡಾಟ್ ಕಾಂ ಲೇಖನ
ಕೊಡಚಾದ್ರಿ ಗುಡ್ಡದ ಮೇಲೆ ಯಕ್ಷಗಾನದ ಪ್ರಾತ್ರದಿಂದಲೇ ಆರಂಭಗೊಳ್ಳುವ ಸಿನೆಮಾದಲ್ಲಿ ನಾಯಕ ಪ್ರೇಯಸಿಗೆ ಪ್ರೇಮನಿವೇದನೆಯನ್ನು ಅದೇ ಯಕ್ಷ ವೇಷದಲ್ಲಿಯೇ ಮಾಡುವ ಸನ್ನಿವೇಶ ಹಾಗೂ ಖಳನಟರು ಬೈಕಿನಲ್ಲಿ ಬಂದು ನಾಯಕನೊಂದಿಗೆ ಹೊಡೆದಾಡುವ ಸನ್ನಿವೇಷ ಪ್ರೇಕ್ಷಕನಿಗೆ ಹತ್ತಿರವಾಗುತ್ತದೆ.
ಚಿತ್ರಕಥೆಯಲ್ಲಿ ವಾಸ್ತವ ಇರಬೇಕಿಲ್ಲ ಎಂಬುದು ನಿಜ. ಚಿತ್ರಗಳು ನಿರ್ದೇಶಕನ ಕಲ್ಪನೆಗೆ ತಕ್ಕಂತೆ ನಿರ್ಮಿಸುವುದೆಂದು ಅಂದುಕೊಳ್ಳುವುದು ಸರಿಯೇ. ಕುಂದಾಪುರ ಕನ್ನಡದ ಚಿತ್ರ ಮಾಡಿರುವುದೇ ದೊಡ್ಡದು ಎಂದು ಭಾಷೆಯ ಸೆಂಟಿಮೆಂಟ್ ಇವರುವವರಿಗೆ ಬಿಲಿಂಡರ್ ಸಿನೆಮಾ ಖಂಡಿತ ಇಷ್ಟವಾಗುತ್ತದೆ. ರವಿ ಬಸ್ರೂರು ಅವರ ತಂಡವೂ ಮೊದಲ ಚಿತ್ರ ಗರ್‌ಗರ್‌ಮಂಡ್ಲಕ್ಕಿಂತ ತಾಂತ್ರಿಕವಾಗಿ, ಚಿತ್ರಕಥೆ ಹೆಣೆಯುವುದರಲ್ಲಿ ಸಾಕಷ್ಟು ಬದಲಾಗಿದೆ. ಹಾಗಾಗಿಯೇ ಪ್ರೇಕ್ಷಕನೂ ಪ್ರಭುವೂ ಚಿತ್ರವನ್ನು ಮೆಚ್ಚಿದ್ದಾನೆ. ಆದರೆ ಇವೆಲ್ಲವನ್ನೂ ಮೀರಿ ಚಿತ್ರಕಥೆಯನ್ನಷ್ಟೇ ಗಮನಿಸಿದಾಗ ಕುಂದಾಪುರ ಭಾಷೆಯನ್ನು ಚಿತ್ರಕಥೆಯಲ್ಲಿ ತರುವ ಜೊತೆಗೆ ಕುಂದಾಪುರದ ಸೊಗಡನ್ನು ತುಂಬುವ ಪ್ರಯತ್ನ ಆಗಿದ್ದರೇ ಅದು ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು ಎಂದೆನಿಸುತ್ತದೆ. ಮುಂದಿನ ಚಿತ್ರಗಳಲ್ಲಾದರೂ ರವಿ ಬಸ್ರೂರು ಈ ಬಗ್ಗೆ ಗಮನ ಹರಿಸುವವರೆಂಬ ಭರವಸೆ ಇದೆ. /ಕುಂದಾಪ್ರ ಡಾಟ್ ಕಾಂ ಲೇಖನ
ಅದೇನೇ ಇರಲಿ. ಒಂದು ಸೀಮಿತವಾದ ಪ್ರಾದೇಶಿಕ ಭಾಷೆಯಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ವಿನಿಯೋಗಿಸಿ ಸಿನೆಮಾ ಮಾಡುವ ರವಿ ಬಸ್ರೂರ್ ಮತ್ತವರ ತಂಡದ ಧೈರ್ಯವನ್ನು ಮೆಚ್ಚಲೇಬೇಕು ಮತ್ತು ಪ್ರೋತ್ಸಾಹಿಸಲೇಬೇಕು. ಒಮ್ಮೆಯಾದರೂ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ನೋಡಲೇಬೇಕು. ಎಷ್ಟೇ ಆರೂ ಕುಂದಾಪ್ರ ಭಾಷಿ ಪಿಚ್ಚರ್ ಅಲ್ದಾ… /ಕುಂದಾಪ್ರ ಡಾಟ್ ಕಾಂ ಲೇಖನ
ಇದನ್ನೂ ಓದಿ:
► ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾನೆ ಕುಂದಾಪುರದ ಕುವರ – http://kundapraa.com/?p=4479
► ನಮ್ ಕುಂದಗನ್ನಡದಲ್ಲೂ ಹಾಡಿರ್ ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್. ಇದ್ ಬಿಲಿಂಡರ್ ಖದರ್ – http://kundapraa.com/?p=12184
► ಎ.22ರಿಂದ ಕುಂದಾಪ್ರ ಕನ್ನಡದ ಬಹುನಿರೀಕ್ಷೆಯ ಚಿತ್ರ ’ಬಿಲಿಂಡರ್’ ತೆರೆಗೆ – http://kundapraa.com/?p=13447
► ಬಿಲಿಂಡರ್ ಕುಂದಾಪ್ರ ಭಾಷೆಗಾಗಿ ಮಾಡಿದ ಚಿತ್ರ. ತಪ್ಪಿದ್ರೆ ಹೇಳಿ ತಿದ್ಕೊತಿವಿ: ರವಿ ಬಸ್ರೂರು – http://kundapraa.com/?p=13544
► ಕುಂದಾಪುರ ಕನ್ನಡದ ಸಿನೆಮಾ ಗರ್‍ಗರ್‍ಮಂಡ್ಲ (ಸಂದರ್ಶನ)- http://kundapraa.com/?p=2383
► ವೀಡಿಯೋ ನೋಡಿ | ಬಿಲಿಂಡರ್ ಚಿತ್ರಕ್ಕೆ ಪುನಿತ್ ರಾಜಕುಮಾರ್ ಹಾಡು! – http://kundapraa.com/?p=12604
► ವೀಡಿಯೋ: ಕನ್ನಡ ಸಿನೆಮಾ ಬಿಲಿಂಡರ್ ಗೆ ನಟ ಶ್ರೀಮರಳಿ ಹಾಡು – http://kundapraa.com/?p=12920