ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಶುಭದಾ ಆಂಗ್ಲ ಮಾಧ್ಯಮ ಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಿರಂತರವಾಗಿ ಶೇಕಡಾ 100 ಫಲಿತಾಂಶವನ್ನು ದಾಖಲಿಸುತ್ತ ಬಂದಿದ್ದು 2020-21ನೇ ಸಾಲಿನ ಶಾಲಾವಾರು ಫಲಿತಾಂಶ ಗುಣಮಟ್ಟದಲ್ಲಿ ‘ಎ’ಗ್ರೇಡ್ ಪಡೆದಿದೆ. ವಿದ್ಯಾರ್ಥಿಗಳಾದ ಸ್ವೀಕೃತಿ ಶೆಟ್ಟಿ 99.04% , ಪ್ರಣಮ್ಯ ಚಾತ್ರ 96.16% ಮತ್ತು ಸಂಜಿತಾ 93.44% ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಮತ್ತು ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದಿನೆ ಸಲ್ಲಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಟೊಯೋಟಾ ಇನ್ನೊವಾದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ಬೈಂದೂರು ಪೊಲೀಸರು ವಶಕ್ಕೆ ಪಡೆದು ಅದರಲ್ಲಿದ್ದ ಗೋವುಗಳನ್ನು ರಕ್ಷಿಸಿದ ಘಟನೆ ನಾಗೂರಿನಲ್ಲಿ ನಡೆದಿದೆ. ಭಟ್ಕಳ ಕಡೆ ಹೋಗುತ್ತಿದ್ದ ಇನ್ನೊವಾ ಟೊಯೋಟಾ ವಾಹನ ನಾಗೂರಿನಲ್ಲಿ ಕೆಟ್ಟು ಮಧ್ಯ ದಾರಿಯಲ್ಲಿ ನಿಂತಿದ್ದ ಸಂದರ್ಭ ಸಾರ್ವಜನಿಕರು ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಗೋವುಗಳು ಇರುವುದು ಗಮನಕ್ಕೆ ಬರುತ್ತಿದ್ದಂತೆ ತಕ್ಷಣವೇ ಬೈಂದೂರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ನಾಲ್ಕು ದನದ ರಕ್ಷಣೆ ಮಾಡಿದ್ದಾರೆ. ಆರೋಪಿ ಪರಾರಿಯಾಗಿದ್ದು ಪೋಲಿಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದು ಅತ್ಯುನ್ನತ ಸಾಧನೆ ಮಾಡಿದ ಶ್ರೇಯಾ ಮೇಸ್ತ ಅವರನ್ನು ಗಂಗೊಳ್ಳಿಯ ಸ್ಟೆಲ್ಲಾ ಮಾರೀಸ್ ಪ್ರೌಢಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿಯ ಖಾರ್ವಿಕೇರಿಯಲ್ಲಿರುವ ಶ್ರೇಯಾ ಅವರ ಮನೆಗೆ ತೆರಳಿದ ಶಾಲೆಯ ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಜ್ಯೋತಿ ಎ.ಸಿ. ಅವರು ಶಾಲೆಯ ವತಿಯಿಂದ ಶ್ರೇಯಾ ಮೇಸ್ತ ಹಾಗೂ ಸಂಜಯ್ ಮೇಸ್ತ ಅವರನ್ನು ಸನ್ಮಾನಿಸಿ ಗೌರವಿಸಿದರು. ಗಂಗೊಳ್ಳಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಸೌಪರ್ಣಿಕ, ಶಾಲೆಯ ಮುಖ್ಯ ಶಿಕ್ಷಕಿ ಕ್ರೆಸೆನ್ಸ್, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪುರುಷೋತ್ತಮ ಮೇಸ್ತ, ಪವಿತ್ರಾ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಅಲಿಮ್ಕೋ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ, ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ ಆರ್ಥೋಪೆಡಿಕ್ (ಮೂಳೆ ಚಿಕಿತ್ಸೆ)/ ದೈಹಿಕ ದುರ್ಬಲತೆ, ಶ್ರವಣದೋಷ, ದೃಷ್ಟಿಹೀನತೆ ಮತ್ತು ವೃದ್ಧಾಪ್ಯದಲ್ಲಿ ಹಲ್ಲುಗಳ ನಷ್ಟ ಮುಂತಾದ ತೊಂದರೆಯುಳ್ಳ ಹಿರಿಯ ನಾಗರಿಕರಿಗೆ ಪುನರ್ವಸತಿ ತಜ್ಞರು ಸೂಚಿಸಿದ ಅರ್ಹತೆಗೆ ಅನುಗುಣವಾಗಿ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಿದ್ದಾರೆ. ಭಾರತ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿಯಲ್ಲಿ ಹಿರಿಯ ನಾಗರಿಕರ ನೋಂದಾವಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಹತ್ತಿರದ ಜನ ಸೇವಾ ಕೇಂದ್ರದಲ್ಲಿ ಆನ್ಲೈನ್ ಮೂಲಕ ನೋಂದಾವಣಿಯನ್ನು ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದೂರವಾಣಿ ಸಂಖ್ಯೆ 0820-2574810/811ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಂದಗನ್ನಡ(ಕುಂದಾಪುರ ಕನ್ನಡ)ದ ಅಧ್ಯಯನಕ್ಕಾಗಿ ಪ್ರತ್ಯೇಕ ಪೀಠ ಸ್ಥಾಪಿಸಿ, ವಿಶೇಷ ಅನುದಾನ ಮೀಸಲಿಡುವಂತೆ ಕೋರಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದ್ದಾರೆ. ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರುವ ಹೆಗ್ಡೆ ಅವರು, ಉಡುಪಿ ಜಿಲ್ಲೆಯ ಕುಂದಾಪುರ ಪ್ರದೇಶದ ಜನರ ಭಾಷೆಯಾಗಿರುವ ಕುಂದಗನ್ನಡ ಅಧ್ಯಯನಕ್ಕೆ ಮಂಗಳೂರು ವಿವಿಯಲ್ಲಿ ಅಧ್ಯಯನ ಪೀಠವೊಂದನ್ನು ಸ್ಥಾಪಿಸಬೇಕು. ಈ ಸಂಬಂಧ ವಿವಿ ಸಿಂಡಿಕೇಟ್ ಕೂಡ ಒಪ್ಪಿಗೆ ನೀಡಿದೆ. ಅಧ್ಯಯನ ಪೀಠಕ್ಕೆ ಸರಕಾರದಿಂದ 25 ಲಕ್ಷ ರೂ. ಅನುದಾನ ಮೀಸಲಿಡುವಂತೆ ಕೋರಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಇದೇ ವೇಳೆ ಜಯಪ್ರಕಾಶ್ ಹೆಗ್ಡೆ ಅವರು ಕುಂದಾಪುರ ಕನ್ನಡದ (ಕುಂದಗನ್ನಡ) ನಿಘಂಟನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹವನ್ನು ಅಡ್ಡಗಟ್ಟಿದ ಬೈಂದೂರು ಪೊಲೀಸರು ಆರು ಗೋವುಗಳನ್ನು ರಕ್ಷಣೆ ಮಾಡಿದ್ದು, ವಾಹನ ಹಾಗೂ ಆರೋಪಿ ಶಬ್ಬೀರ್ (35) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯೊಂದಿಗೆ ಕಾರ್ಯಚರಣೆ ನಡೆಸಿದ ಬೈಂದೂರು ಪೊಲೀಸರು, ವಾಹನವನ್ನು ಹಿಂಬಾಲಿಸಿಕೊಂಡು ಹೋಗಿ ತಡೆಗಟ್ಟಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿರುವುದು ದೃಢವಾಗುತ್ತಿದ್ದಂತೆ ಪಿಕಪ್ ವಾಹನ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಪವನ್ ನಾಯಕ್ ಮತ್ತು ಸಿಬ್ಬಂದಿಗಳಾದ ಹೆಡ್ ಕಾನ್ಸಟೆಬಲ್ ಶ್ರೀನಿವಾಸ್ ನಾಯಕ್, ಸುಜಿತ್, ಅಶೋಕ್ ರಾಠೋಡ್ ಭಾಗಿಯಾಗಿದ್ದರು. ವಶಕ್ಕೆ ಪಡೆದ ಆರು ಗೋವುಗಳನ್ನು ಬೈಂದೂರು ಪೋಲಿಸ್ ವಸತಿ ಗೃಹದಲ್ಲಿ ಉಪಚರಿಸಲಾಯಿತು. ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದರಾದ ಬಿ. ವೈ ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿರುವ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ‘ವನ್ಯಜೀವಿ ಪ್ರಾಣಿ ರಕ್ಷಣಾ ಕೇಂದ್ರ ಹಾಗೂ ಮೂಕಾಂಬಿಕಾ ಪ್ರಾಣಿಶಾಸ್ತ್ರೀಯ ಉದ್ಯಾನ’ ಸ್ಥಾಪನೆ ಬಗ್ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಮೂಕಾಂಬಿಕಾ ಅಭಯಾರಣ್ಯವು ಕುಂದಾಪುರ, ಬೈಂದೂರು ತಾಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಸೇರಿ 370.37 ಚ.ಕಿಮೀ ಪಶ್ಚಿಮ ಕರಾವಳಿ ಅರೆ ಉಷ್ಣವಲಯ ಹಾಗೂ ಉಷ್ಣವಲಯ ನಿತ್ಯಹರಿದ್ವರ್ಣ ಅರಣ್ಯ (west coast semi-tropical and tropical evergreen forest) ಪ್ರದೇಶವಾಗಿದ್ದು, ಮೂಕಾಂಬಿಕಾ ಅಭಯಾರಣ್ಯದಲ್ಲಿ ಚಿರತೆ, ಕರಡಿ, ಕಾಡುಕೋಣ, ಕೆನ್ನಾಯಿ, ಗುಳ್ಳೆನರಿ, ಕಡವೆ, ಸಾರಂಗ ಹಾಗೂ ಇನ್ನಿತರೆ ಪ್ರಾಣಿ ಸಂಕುಲಗಳು, ಜಂಗಲ್ ಮೈನಾ, ಬಿಳಿ ಹಾಗೂ ಕೆಂಪು ಬುಲ್ ಬುಲ್, ಮಂಗಟ್ಟೆ(hornbill) ಹಾಗೂ ಇನ್ನಿತರೆ ಹಕ್ಕಿಗಳು ನೆಲೆಸಿವೆ. ಪ್ರಾಣಿಗಳ ಸಂಘರ್ಷ ನಡುವೆ ಅಪಘಾತದಲ್ಲಿ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಧಾರ್ಮಿಕ ಕ್ಷೇತ್ರದ, ಪರಿಸರದ ಸ್ವಚ್ಛತೆ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಅರೆಹಾಡಿ ಜಟ್ಟಿಗೇಶ್ವರ ದೇವಾಲಯದ ಪರಿಸರ ಸ್ವಚ್ಛತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಪ್ಪುಂದ ಒಕ್ಕೂಟದ ವತಿಯಿಂದ ನಡೆಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಪ್ಪುಂದ ಒಕ್ಕೂಟದ ಅಧ್ಯಕ್ಷೆ ವೀಣಾ, ಸೇವಾಪ್ರತಿನಿಧಿ ಚೈತ್ರ ಅವರ ನೇತೃತ್ವದಲ್ಲಿ ಸದಸ್ಯರು ದೇವಸ್ಥಾನದ ಪರಿಸರ ಹಾಗೂ ವಠಾರವನ್ನು ಸ್ವಚ್ಛಗೊಳಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಧಾರ್ಮಿಕ ಕ್ಷೇತ್ರದ, ಪರಿಸರದ ಸ್ವಚ್ಛತೆ ಕಾರ್ಯಕ್ರಮದ ಅಂಗವಾಗಿ ಗಂಗೊಳ್ಳಿಯ ಶ್ರೀ ಇಂದುಧರ ದೇವಾಲಯದ ಪರಿಸರ ಸ್ವಚ್ಛತೆಯನ್ನು ಇಲ್ಲಿನ ಶ್ರೀ ಇಂದುಶ್ರೀ ಮಹಿಳಾ ಸಂಘದ ವತಿಯಿಂದ ನಡೆಸಲಾಯಿತು. ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯರು ದೇವಸ್ಥಾನದ ಪರಿಸರ, ನಾಗದೇವರ ಸ್ವಾಮೀ ಹಾಗೂ ದೇವಸ್ಥಾನದ ವಠಾರವನ್ನು ಸ್ವಚ್ಛಗೊಳಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ವಿ. ಸುನಿಲ್ ಕುಮಾರ್ ಅವರ ನಡೆ ಗಮನ ಸೆಳೆಯಿತು. ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಭಾರತಾಂಬೆ ಮತ್ತು ನಾಡ ದೇವತೆಯ ಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆಯೇ ಕುಳಿತು ಕಡತಕ್ಕೆ ಸಹಿ ಹಾಕಿ ಇಲಾಖಾ ಕಾರ್ಯ ಆರಂಭಿಸಿದರು. ಈ ಸಂದರ್ಭ 2019-20ನೇ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದಶ್ರೀ ಪ್ರಶಸ್ತಿ ಪುರಸ್ಕೃತೆ ಭೀಮವ್ವ ದೊಡ್ಡ ಬಾಳವ್ವ ಶಿಳ್ಳೆ ಕ್ಯಾತರ ಮತ್ತು ಬಿಬಿ ಕೊರಂಟೈನ್ ಪ್ರಶಸ್ತಿಗೆ ಭಾಜನರಾದ ಹೆಚ್ ವಿ ವೆಂಕಟಸುಬ್ಬಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅಧಿಕಾರ ಸ್ವೀಕರಿಸಿದ ನಂತರ ಕಲಾಕ್ಷೇತ್ರದ ಆವರಣದಲ್ಲಿ ಇರುವ ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಮಾರಾಟ ಮಳಿಗೆಯಲ್ಲಿ ಪುಸ್ತಕ ಖರೀದಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ ಮತ್ತು ಕಲಾವಿದರೊಂದಿಗೆ ಅಲ್ಲಿಯೇ ಇದ್ದ ಕ್ಯಾಂಟೀನ್ ನಲ್ಲಿ ಕಾಫಿ ಸೇವನೆ ಮಾಡಿದರು.
