Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮಾಧ್ಯಮದವರೇ, ಇನ್ನೆಷ್ಟು ದಿನ ಕಿವಿ ಮೇಲೆ ಹೂವಿಡ್ತೀರಾ?!
    ಲೇಖನ

    ಮಾಧ್ಯಮದವರೇ, ಇನ್ನೆಷ್ಟು ದಿನ ಕಿವಿ ಮೇಲೆ ಹೂವಿಡ್ತೀರಾ?!

    Updated:05/10/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ವಿನಾಯಕ ಕೊಡ್ಸರ
    ಇದು ಇಂಟರ್‌ನೆಟ್ ಜಗತ್ತು. ಒಂದು ಸುದ್ದಿ, ಮಾಹಿತಿ ಮಾಧ್ಯಮಗಳಿಗಿಂತ ಮೊದಲು ಮೊಬೈಲ್‌ನಿಂದ ಓದುಗನ ಕೈ ಸೇರುತ್ತಿದೆ. ಜನ ಟಿವಿ ನೋಡ್ತಾರೋ, ಪೇಪರ್ ಓದ್ತಾರೋ ಗೊತ್ತಿಲ್ಲ. ಆದ್ರೆ ಕೈಯ್ಯಲ್ಲಿರೋ ಮೊಬೈಲ್‌ನಿಂದ ಆಗಾಗ ಜಾಲತಾಣಗಳನ್ನು ಜಾಲಾಡುತ್ತಾರೆ. ನಗರವಾಸಿಗಳು ಮಾತ್ರ ಈ ಇಂಟರ್‌ನೆಟ್ ಜಗತ್ತಿಗೆ ಹೊಂದಿಕೊಂಡೋರು ಅನ್ನೋ ಟ್ರೆಂಡ್ ಬದ್ಲಾಗ್ತಿದೆ. ಹಳ್ಳಿ ಮೂಲೆಯವನಿಗೂ ಸ್ಮಾರ್ಟ್‌ಫೋನ್ ಬಳಕೆ ಗೊತ್ತಾಗಿದೆ. ಹೀಗಿರುವಾಗ ನಮ್ಮ ಮಾಧ್ಯಮಗಳು ಅದೆಷ್ಟು ಎಚ್ಚರವಾಗಿದ್ದರು ಸಾಕಾಗಲಾರದು.

    Click Here

    Call us

    Click Here

    ಹೀಗೆಲ್ಲ ಸ್ಪರ್ಧೆ ಎದುರಾಗಿರುವಾಗಲು ನಮ್ಮ ಒಂದಷ್ಟು ಮಾಧ್ಯಮಗಳು ಮತ್ತಷ್ಟು ಬೇಜವಬ್ದಾರಿ ತೋರುತ್ತಿರುವುದು ಬೇಸರದ ಸಂಗತಿ. ಜಾಲತಾಣದಲ್ಲಿ ಜಾಲಾಡುವಷ್ಟು ಜಾಣತನವಿರುವ ವ್ಯಕ್ತಿ ಖಂಡಿತ ವಿವೇಕಿ. ಆತನಿಗೆ ಒಂದು ಸುದ್ದಿಯನ್ನು ಕ್ರಾಸ್‌ಚೆಕ್ ಮಾಡಿ ಅದರ ಹಿನ್ನೆಲೆಯನ್ನು ಹುಡುಕುವಷ್ಟು ವಿವೇಚನೆ ಇರುತ್ತದೆ. ಇಂತಿಪ್ಪ ಕಾಲದಲ್ಲೂ ನೀವು ನಿಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು, ಸ್ಟೋರಿಗಳನ್ನು ಮಾಡಿಕೊಂಡು ಯಾರ ಕಿವಿ ಮೇಲೆ ಹೂವು ಇಡಲು ಹೊರಟಿರುವಿರಿ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ.

    ಮಾಧ್ಯಮ ಜಾಹೀರಾತು ಆಧಾರಿತ. ಪತ್ರಿಕೆಯೋ, ಟಿವಿಯೋ ಉಳಿಯಬೇಕಾದರೆ ಅದಕ್ಕೆ ಜಾಹೀರಾತು ಬೇಕು. ಪೇಯ್ಡ್ ನ್ಯೂಸ್‌ಗಳು ಬರುತ್ತವೆ ಎಂಬುದನ್ನೆಲ್ಲ ನಾವೆಲ್ಲ ಒಪ್ಪಿಕೊಂಡಿದ್ದೇವೆ. ಜಪಾನಿ ತೈಲದ ಜಾಹೀರಾತನ್ನು ಇದೇ ಒಂದು ದೃಷ್ಟಿಯಿಂದ ಸಹಿಸಿಕೊಂಡಿದ್ದೇವೆ! ಇಷ್ಟಾಗಿಯೂ ನಿಮ್ಮ ಒಂದಷ್ಟು ಬೇಜವಬ್ದಾರಿತನಕ್ಕೆ ಕೊನೆಯೆಂದು ಎಂಬುದಕ್ಕೆ ಮಾತ್ರ ಉತ್ತರ ಸಿಗುತ್ತಿಲ್ಲ.

    ಹಿಂಗೆಲ್ಲ ಮಾತಾಡಿದ್ರೆ ನಾನು ಮಾಧ್ಯಮ ಜಗತ್ತಿನ ಜವಾಬ್ದಾರಿತನಕ್ಕೆ ರಾಯಭಾರಿಯಂತೆ ವರ್ತಿಸುತ್ತೇನೆ ಎಂದು ಒಂದಷ್ಟು ಜನ ಉರಿದುಕೊಳ್ತಾರೆ ಅಂತ ಗೊತ್ತು ಬಿಡಿ. ಆ ಹುದ್ದೆಯ ಕನಸು, ಭ್ರಮೆ ಎರಡು ಇಲ್ಲ. ಯಾವ ಮೀಡಿಯಾ ಯಾರ ಒಡೆತನದ್ದು? ಅಲ್ಲಿ ಯಾರ ಸುದ್ದಿ ಬರುತ್ತೆ, ಯಾರದ್ದು ಬರಲ್ಲ ಎನ್ನುವುದೆಲ್ಲ ಇವತ್ತು ಗುಟ್ಟಾಗಿ ಉಳಿದಿಲ್ಲ ಅಥವಾ ಓದುಗ ಅದನ್ನು ಬಯಸುವುದೂ ಇಲ್ಲ. ಆದ್ರೆ ಅದು ಸೃಷ್ಟಿಸಿರುವ ದುರಂತ ಪರದೇಶಿಗಳ ಮೇಲೆ ಮಾಧ್ಯಮಗಳ ಆಕ್ರಮಣ. ಜಾಹೀರಾತು ಎಂಬ ಹೆಸರಿನಲ್ಲೋ, ಪೇಯ್ಡ್ ಎಂಬ ಸ್ಪೇಸ್‌ನಿಂದಲೋ ದುಡ್ಡಿದ್ದವರು ಮಾಧ್ಯಮಗಳನ್ನು ಬ್ಲಾಕ್ ಮಾಡಿಕೊಂಡಿದ್ದಾರೆ. ಒಂದಷ್ಟು ಜನರ ಸುದ್ದಿಯನ್ನು ಯಾವ ಲೆಕ್ಕದಲ್ಲಿ ಅಳೆದು ತೂಗಿದರು ಹಾಕಲು ಸಾಧ್ಯವಿಲ್ಲ. ನಾಟಿ ವೈದ್ಯದಿಂದ ಅರಣ್ಯ ನಾಶ ಎನ್ನುವವರು, ಕೆಲವರ ರೆಸಾರ್ಟ್‌ನಿಂದಾಗುವ ಲೂಟಿ ಕುರಿತು, ಕಾರ್ಪೊರೇಟ್ ಆಸ್ಪತ್ರೆಗಳ ಸುಲಿಗೆ ಕುರಿತು ಮಾತನಾಡಲಾರರು! ಅವರು ಇಂಥದ್ದೇ ವಿಷಯದ ಕುರಿತು ಮಾತನಾಡಬೇಕು, ಇಂಥದ್ದನ್ನು ಮಾತನಾಡಬಾರದು ಎನ್ನಲು ನಾವ್ಯಾರು ಅಲ್ಲ. ಅವರ ಸ್ಪೇಸ್, ಅಧಿಕಾರ, ಅವರ ವಿವೇಚನೆ. ಕುಂದಾಪ್ರ ಡಾಟ್ ಕಾಂ ಲೇಖನ

    ವಿಷ್ಯ ಅದಲ್ಲ. ನೋಡಿದ್ರೆ ಗೊತ್ತಾಗುತ್ತೆ ಈ ಸುದ್ದಿಯಲ್ಲಿ ಏನು ಹುರುಳಿಲ್ಲ, ಇದು ಒಂದು ಮುಖದ ಸುದ್ದಿ ಅಂತ. ಆದ್ರು ನೀವು ಯಾರಿಗೂ ಕೇರ್ ಎನ್ನದೆ ಅಂಥದ್ದನ್ನೇ ಪ್ರಕಟಿಸ್ತೀರಿ. ನೋಡುಗ ಮುರ್ಖ ಅಂತ ನೀವೇ ನಿರ್ಧಾರ ಮಾಡಿಬಿಡ್ತೀರಿ! ನಿಮ್ಮ ಧೈರ್ಯವನ್ನು ಮೆಚ್ಚಲೇ ಬೇಕು. ಈ ನಡುವೆ ಮಾಧ್ಯಮಗಳಿಗೆ ಸುದ್ದಿಯ ಕೊರತೆ ಇದೆ ಅಂತ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ತೀರ ೧೦-೨೦ರೂ. ಸಂಪಾದಿಸುವ ದುರ್ಬಲರ ಮೇಲೆ ಸವಾರಿ ನಡೆಸಿ, ಯಾರದ್ದೋ ಸಂಸಾರದ ಸಮಸ್ಯೆಯ ಸಂಧಾನ ನಡೆಸಿ ನೀವು ಸಾಮಾಜಿಕ ಕಾಳಜಿ ಮೆರೆಯುತ್ತಿರುವುದನ್ನು ನೋಡುಗ/ಓದುಗರಾದ ನಾವೆಲ್ಲ ನೋಡಿ, ಓದಿ ಭೇಷ್ ಎನ್ನಬೇಕು! ಸಂಭ್ರಮಿಸಬೇಕು.

    Click here

    Click here

    Click here

    Call us

    Call us

    ’ಪತ್ರಿಕೆಗೆ ಬರೆಯೋದು ಹೇಗೆ?’ ಪುಸ್ತಕ ತಲುಪಿಸುವ ನಿಟ್ಟಿನಲ್ಲಿ ಸುಮಾರಷ್ಟು ಪತ್ರಿಕೋದ್ಯಮ ಕಾಲೇಜಿಗೆ ಹೋಗಿಬಂದೆ. ನಿರೀಕ್ಷಿತ ಫಲಿತಾಂಶ. ’ನಿಮ್ಮ ಮಾಧ್ಯಮದ ಹುಚ್ಚಾಟದ ಬಗ್ಗೆ ಬರೆಯಿರಿ’ ಸರ್ ಎಂಬ ಬಿಟ್ಟಿ ಸಲಹೆಯನ್ನು ತುಂಬ ಜನ ಕೊಟ್ಟರು. ’ಸರ್, ನಾವು ನಮ್ಮ ಮಕ್ಕಳಿಗೆ ಬಿ.ಎಡ್ ಮಾಡಿ ಎನ್ನುತ್ತಿದ್ದೇವೆ, ಪ್ರಾಧ್ಯಾಪಕರಾಗಿ ಎನ್ನುತ್ತೇವೆ ಹೊರತು ಪತ್ರಕರ್ತರಾಗಿ ಎನ್ನುವುದಿಲ್ಲ’ ಅಂತಾನು ಸುಮಾರಷ್ಟು ಜನ ಹೇಳಿದ್ರು. ಕೇಳುವಾಗ ಒಂದು ರೀತಿ ಪಿಚ್ಚೆನಿಸಿತು. ಅಲ್ಲ ಪತ್ರಿಕೋದ್ಯಮದ ಕಾಲೇಜುಗಳೇ ಪತ್ರಕರ್ತರಾಗಬೇಡಿ ಎನ್ನುತ್ತಿದ್ದಾರೆ ಅಂದ್ರೆ, ನಾವೆಂಥ ದುಸ್ಥಿತಿ ಸೃಷ್ಟಿಸಿಟ್ಟಿದ್ದೇವೆ? ಇದನ್ನೆಲ್ಲ ಸರಿ ಮಾಡುವವರು ಯಾರು? ಖಂಡಿತ ಯಾರ ಬಳಿಯೂ ಉತ್ತರವಿಲ್ಲ.

    ಮೊನ್ನೆ ನಾಗೇಶ್ ಹೆಗಡೆಯವರ ಮನೆಯಲ್ಲಿ ಕುಳಿತಾಗ ಇದನ್ನೇ ಚರ್ಚಿಸ್ತಾ ಇದ್ವಿ. ನಾಗೇಶ್ ಹೆಗಡೆ, ನಿರಂಜನ ವಾನಳ್ಳಿ, ಶಿವಾನಂದ ಕಳವೆ, ಎಚ್.ಆರ್.ಶ್ರೀಶ ಇವರೆಲ್ಲ ನನಗಂತು ಸದಾ ಸಕಾರಾತ್ಮಕ ಪತ್ರಿಕೋದ್ಯಮದ ರಾಯಭಾರಿಗಳಂತೆ ಕಾಣಿಸುತ್ತಾರೆ. ತುಂಬ ವರ್ಷಗಳಿಂದ ಅವರೆಲ್ಲ ಸೃಜನಶೀಲ ಪತ್ರಿಕೋದ್ಯಮ ನಿರ್ಮಾಣದ ಕೆಲಸಗಳು, ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಾಲವೇ ಉತ್ತರಿಸಬೇಕು ಇದಕ್ಕೆಲ್ಲ ಅಂತ ನಾಗೇಶ್ ಹೆಗಡೆಯವರು ತಮ್ಮದೇ ಒಂದಷ್ಟು ಉದಾಹರಣೆಗಳೊಂದಿಗೆ ಹೇಳಿದಾಗ ಇನ್ನಷ್ಟು ಆತಂಕವಾಯ್ತು. ನಿಜ, ಇವತ್ತಿನ ದಿನದಲ್ಲಿ ಯಾರು ಯಾರನ್ನು ತಿದ್ದಲು ಸಾಧ್ಯವಿಲ್ಲ.

    ಸಮಸ್ಯೆಯೆಂದ್ರೆ ಇವತ್ತು ಸುಮಾರಷ್ಟು ಜನ ’ಪತ್ರಿಕೋದ್ಯಮ ಅಂದ್ರೆ ಭ್ರಷ್ಟರ ಕೂಪ’ ಎಂಬ ಸಾರ್ವತ್ರಿಕ ತೀರ್ಮಾನಕ್ಕೆ ಬಂದಿರುವುದು. ’ಪತ್ರಕರ್ತರಿಗೇನು ಬಿಡಿ. ಯಾರನ್ನಾದ್ರು ಹೆದರಿಸಿ, ಬೆದರಿಸಿ ಬದುಕಿ ಬಿಡ್ತೀರ’ ಅಂತ ಎಷ್ಟೋ ಗೆಳೆಯರು ಹೇಳುತ್ತಾ ಇರ್ತಾರೆ. ಒಂದು ಕಾಲದಲ್ಲಿ ಪೀತ ಪತ್ರಿಕೋದ್ಯಮ ಉತ್ತುಂಗದಲ್ಲಿತ್ತು. ಸುದ್ದಿ ವಾಹಿನಿಗಳು ಬಂದಾಗ್ಲು ಜನ ಹೆದರುತ್ತ ಇದ್ದರು. ಆದರೆ ಇವತ್ತು ಕಾಲ ಹಾಗಿಲ್ಲ. ಯಾರದ್ದಾದ್ರು ನೆಗೆಟೀವ್ ಸುದ್ದಿ ಮಾಡ್ತೀವಿ ಅಂದ್ರೆ ಅವನೇ ಖುದ್ದಾಗಿ ಮಾಹಿತಿ ಕೊಡ್ತಾನೆ! ನಂಗೊಂದಿಷ್ಟು ಪ್ರಚಾರ ಆದ್ರು ಸಿಕ್ತು ಅಂತಾನೆ. ದುಡ್ಡು ಕೊಟ್ಟು ಒಂದು ಸುದ್ದಿ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಆತನಾದ್ರು ಎಷ್ಟು ಪತ್ರಿಕೆ, ಟಿವಿಗೆ ಅಂತ ದುಡ್ಡು ಕೊಡಬಲ್ಲ?! ಇನ್ ಬಿಟ್ವೀನ್ ಪೇಯ್ಡ್ ಸ್ಲಾಟ್‌ಗಳ ದರ ಟಿವಿಯಲ್ಲಿ ಗಣನೀಯವಾಗಿ ಕುಸಿದಿದೆ! ಇಷ್ಟರ ನಡುವೆಯೂ ಹಣ ಕೊಟ್ಟು ಮಾಧ್ಯಮಗಳನ್ನು ತೆಕ್ಕೆಯಲ್ಲಿ ಇಟ್ಟುಕೊಳ್ಳುವ ಒಂದಷ್ಟು ಕೋಟ್ಯಾಧಿಪತಿಗಳು ಇರಬಹುದು. ಹಾಗಂತ ಆ ದುಡ್ಡಿಗೆ ಎಲ್ಲ ಪತ್ರಕರ್ತರು ವಾರಾಸುದಾರರಲ್ಲ. ಒಂದಷ್ಟು ಮಂದಿ ಮಾತ್ರ.

    ಅದಕ್ಕಿಂತ ಮಿಗಿಲಾಗಿ ದುರಂತ ಹುಟ್ಟು ಹಾಕುತ್ತಿರುವುದು ಸುದ್ದಿಯ ಮೂಲಗಳು. ಸ್ಪರ್ಧೆ ಹೆಚ್ಚಾದಾಗ ಪ್ರತಿ ಪತ್ರಕರ್ತನಿಗು ಸುದ್ದಿ ಬೇಕು. ಬೇರೆಯವರಿಗಿಂತ ಮೊದಲು ಸುದ್ದಿ ನೀಡಬೇಕೆಂಬ ಹಂಬಲ. ಹಾಗಾಗಿ ಎಲ್ಲ ಪತ್ರಕರ್ತರು ಒಂದಷ್ಟು ಸುದ್ದಿ ಸೋರ್ಸ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಇವತ್ತು ಆ ಸೋರ್ಸ್‌ಗಳೆ ಮಾಧ್ಯಮದ ಹಾದಿ ತಪ್ಪಿಸುವ ಕೇಂದ್ರಗಳಾಗಿವೆ. ತನಗೆ ಆಗದ ಯಾವನೋ ಬಗ್ಗೆಯೋ ಒಂದಷ್ಟು ದಾಖಲೆಗಳೊಂದಿಗೆ ಮಾಹಿತಿ ಕೊಡ್ತಾನೆ. ಸ್ಟೋರಿ ಫೈಲ್ ಮಾಡಲೇಬೇಕಾದ ಒತ್ತಡದಲ್ಲಿರುವ ಪತ್ರಕರ್ತ ಆ ಸುದ್ದಿಯನ್ನು ಕ್ರಾಸ್‌ಚೆಕ್ ಮಾಡುವ ಗೋಜಿಗೂ ಹೋಗುವುದಿಲ್ಲ.

    ಮೊನ್ನೆ ಒಂದು ಪತ್ರಿಕೆ ತೀರ ಹಾಸ್ಯಾಸ್ಪದವಾಗಿ ಎಲ್‌ಇಡಿ ಬಲ್ಬ್ ವಿಷಕಾರಿ ಎಂದು ಬರೆದ ಸುದ್ದಿಯ ಕುರಿತು ಟಿ.ಜಿ.ಶ್ರೀನಿಧಿ ಹೇಳ್ತಾ ಇದ್ರು. ನಾಗೇಶ್ ಹೆಗಡೆ ಕೂಡ ಅದೇ ವಿಚಾರ ಪ್ರಸ್ತಾಪ ತೆಗೆದ್ರು. ಇದೇ ಇವತ್ತಿನ ದುರಂತ. ಖಂಡಿತ ಎಲ್ಲ ಪತ್ರಕರ್ತರು ಎಲ್ಲ ವಿಷಯದಲ್ಲಿ ನಿಪುಣರಲ್ಲ. ಅದರಲ್ಲು ವಿಜ್ಞಾನ, ವಾಣಿಜ್ಯ ಎಲ್ಲ ತುಸು ಜ್ಞಾನ ಬೇಡುವ ವಿಷಯಗಳು. ಅಂಥ ಸಂದರ್ಭದಲ್ಲಿ ಶ್ರೀನಿಧಿಯವರಿಗೋ, ನಾಗೇಶ್ ಹೆಗಡೆಯವರಿಗೋ, ಪವನಜಗೋ ಅಥವಾ ವಿಜ್ಞಾನ ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿದ ಯಾರಿಗೋ ಕಾಲ್ ಮಾಡಿದ್ರೆ ವಿಷಯ ಸ್ಪಷ್ಟಪಡಿಸ್ತಾರೆ. ನಾನಂತು ಖುದ್ದಾಗಿ ಈ ಕೆಲಸ ಮಾಡುತ್ತಿದ್ದೆ. ಇವತ್ತು ಯಾವುದೋ ಒಂದು ಹೊಸ ಎಲೆಕ್ಟ್ರಾನಿಕ್ಸ್ ವಸ್ತು ಖರೀದಿಸುವಾಗ, ಇಂಟರ್‌ನೆಟ್ ಸ್ಪೇಸ್‌ನಲ್ಲಿ ಏನಾದ್ರು ಗೊತ್ತಾಗದೆ ಹೋದ್ರೆ ಶ್ರೀನಿಧಿ, ಪವನಜರಿಗೆ ಕರೆ ಮಾಡಿ ತಲೆ ತಿನ್ನುತ್ತೇನೆ. ಯಾಕಂದ್ರೆ ಅವರೆಲ್ಲ ನಿತ್ಯವೂ ಆ ವಿಷಯದಲ್ಲಿ ಅಪ್‌ಡೇಟ್ ಮತ್ತು ಆಸಕ್ತಿಯುಳ್ಳವರು. ಕುಂದಾಪ್ರ ಡಾಟ್ ಕಾಂ ಲೇಖನ

    ಪ್ರತಿ ವರದಿಗಾರನಿಗೂ ಆಫೀಸು ಮೊಬೈಲ್ ಕೊಟ್ಟು, ಕರೆನ್ಸಿ ಕೊಟ್ಟಿರುತ್ತೆ. ದಿನದಲ್ಲಿ ಒಂದು ಸುದ್ದಿ ಕ್ರಾಸ್‌ಚೆಕ್ ಮಾಡಿಕೊಳ್ಳಲು ಬೇಕಾದ 10 ನಿಮಿಷ ಸಮಯವಂತೂ ಇದ್ದೇ ಇರುತ್ತೆ. ಸಮಸ್ಯೆ ಅಂದ್ರೆ ಪತ್ರಕರ್ತರು ತಮ್ಮ ಮೂಗಿನ ನೇರಕ್ಕೆ ಯೋಚಿಸಿ ತಾವು ಬರೆದಿದ್ದೆ ಸರಿ ಎಂದು ಆಲೋಚಿಸುವುದು. ಬರೆದು ತಪ್ಪಾದ ನಂತರವೂ ಅದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ತಾವು ಎಷ್ಟು ಜನರ ಹಾದಿ ತಪ್ಪಿಸಿದ್ದೇವೆ ಎಂಬ ಅರಿವಿಲ್ಲದೆ ತಾವು ಬರೆದಿದ್ದೆ ಸರಿ ಎಂದು ವಾದಿಸುತ್ತ ಇರುತ್ತಾರೆ! ಒಂದು ನೆಗೆಟೀವ್ ಸ್ಟೋರಿ ಮಾಡುವಾಗ ಇರುವ ಆತುರ, ಕಾತುರತೆ ಅದರ ಇನ್ನೊಂದು ಮಗ್ಗಲನ್ನು ಅವಲೋಕಿಸುವಾಗ, ತಮ್ಮ ತಪ್ಪು ಅರಿತುಕೊಳ್ಳುವಾಗ ಇರುವುದಿಲ್ಲ. ಒಳ್ಳೆ ಸ್ಟೋರಿಗೆ ಮೆಸೇಜ್ ಹಾಕಿದ್ರೆ ಥ್ಯಾಂಕ್ಸ್ ಹೇಳುವವರು, ತಪ್ಪು ಮಾಡಿದಾಗ ತೋರಿಸಿದ್ರೆ ಸೌಜನ್ಯಕ್ಕು ಒಂದು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮೊನ್ನೆ ಯಾರೋ ಹೇಳ್ತಾ ಇದ್ರು. ತಪ್ಪು ಒಪ್ಪಿಕೊಂಡ್ರೆ ದಡ್ಡರಾಗುತ್ತೇವೆ ಅಥವಾ ಸಣ್ಣವರಾಗಿ ಬಿಡುತ್ತೇವೆ ಎಂಬ ಭಯವೋ ಏನೋ ಗೊತ್ತಿಲ್ಲ! ಕುಂದಾಪ್ರ ಡಾಟ್ ಕಾಂ ಲೇಖನ

    ನಾನು ವಿಜಯಕರ್ನಾಟಕದಲ್ಲಿದ್ದಾಗ ಯಾವುದೋ ಪದ ತಪ್ಪು ಬರೆದಿದ್ದಕ್ಕೆ ಶ್ರೀಶ ಸರ್ ಕರೆದು ಹೇಳಿದ್ರು, ನೋಡು ಇನ್ನು 10 ವರ್ಷ ಬಿಟ್ಟು ಯಾರೋ ಪೇಪರ್ ತೆಗೆದು ನೋಡುವವನು ಇದನ್ನೇ ಸರಿ ಅಂತ ಭಾವಿಸಿ ಅಭ್ಯಾಸ ಮಾಡ್ತಾನೆ. ಅವನ್ನ ಮಿಸ್‌ಲೀಡ್ ಮಾಡಿದ ಹಾಗಾಯ್ತು. ಅದಕ್ಕೆ ಬರೆಯೋ ಮೊದ್ಲು ಎರಡೆರಡು ಸಲ ಖಾತ್ರಿ ಮಾಡಿಕೊಳ್ಳಿ ಎಂದು. ಬಹುಶಃ ಇವತ್ತು ಹಾಗೆ ತಿದ್ದುವ ಹಿರಿಯರು ಇಲ್ಲ, ತಿದ್ದುಪಡಿಯನ್ನು ಪಾಸಿಟೀವ್ ಆಗಿ ಸ್ವೀಕರಿಸಿ ಸರಿ ಮಾಡಿಕೊಳ್ಳುವ ಕಿರಿಯರ ಪ್ರಮಾಣವೂ ಕಡಿಮೆ ಇದೆ.

    ಜಾಹೀರಾತು, ಆದಾಯ ಇದೆಲ್ಲ ಹೊರತಾಗಿ ಪತ್ರಕರ್ತರ ಬೇಜವಾಬ್ದಾರಿತನ, ಅರ್ಧಂಬರ್ಧ ತಿಳುವಳಿಕೆ, ನಾನು ಸಣ್ಣವನಾಗಿ ಬಿಡುತ್ತೇನೆ ಎಂಬ ಈಗೋ, ಅವರನ್ನು ಕೇಳಬಾರದು, ಇವರ ಹತ್ರ ಹೇಳಿಸಿಕೊಳ್ಳಬಾರದೆಂಬ ಚೌಕಟ್ಟುಗಳೇ ಎಷ್ಟೋ ಸಲ ಅಭಾಸಯುತ ಸುದ್ದಿಗೆ, ವರದಿಗೆ ಕಾರಣವಾಗುತ್ತೆ. ಅದನ್ನು ತಪ್ಪಿಸುವ ಪ್ರಯತ್ನವನ್ನಾದರು ಒಂದಷ್ಟು ಪತ್ರಕರ್ತರು ಮಾಡಬಹುದೇನೊ. ಒನ್ಸ್ ಅಗೈನ್ ಅವರ ಸ್ಪೇಸ್, ಅವರ ಅಧಿಕಾರ. ನಾವೇನು ಮಾಡಬೇಕೋ ಅದನ್ನು ನಾವು ಮಾಡ್ತಾ ಹೋಗಬೇಕು ಅಷ್ಟೆ…

    ಲೇಖಕರು ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶರನ್ನವರಾತ್ರಿ: ದೇವಿಯ ಒಂಭತ್ತು ಸ್ವರೂಪಗಳ ಮಹತ್ವ

    22/09/2025

    ಬೆಳಕ ಚಿತ್ರಿಸಿದ ಕ್ಷಣಗಳ ಹಬ್ಬ – ವಿಶ್ವ ಛಾಯಾಗ್ರಹಣ ದಿನ

    19/08/2025

    ಮುಖದ ಸೌಂದರ್ಯ ಹೆಚ್ಚಿಸಲು ಫೇಶಿಯಲ್‌ ಯೋಗ ಎಂಬ ಟ್ರೆಂಡ್

    11/04/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಕೊರಗ ಕಾಲೋನಿಯ 8 ಹೊಸ ಮನೆ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ವಿತರಣೆ
    • ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಬಲಪಾಡಿ ನಾರಾಯಣಾಚಾರ್ಯ ಅವರಿಗೆ ಶ್ರದ್ಧಾಂಜಲಿ ಸಭೆ
    • ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ: ಕೆ. ವಿಕಾಸ್‌ ಹೆಗ್ಡೆ
    • ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ
    • ಕುಂದಾಪುರದ ಆರ್. ಎನ್. ಶೆಟ್ಟಿ ಪ.ಪೂ ಕಾಲೇಜಿನ ಬಹುಮಾನ ವಿತರಣೆ ಕಾರ್ಯಕ್ರಮ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.