ಬೈಂದೂರು: ಬೈಂದೂರು ಹಾಗೂ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಂಬೆ-ಶಿರೂರು ಭಾಗದ ಜನರಿಗೆ ಮಂಗಗಳ ಉಪಟಳ ಬಾರಿ ಹೆಚ್ಚಾಗಿದ್ದು, ಗುಂಪು ಗುಂಪಾಗಿ ತೆಂಗಿನ ಮರಗಳ ತೋಟಕ್ಕೆ ಲಗ್ಗೆ ಇಟ್ಟು ಎಗ್ಗಿಲ್ಲದೇ ಎಳನೀರು ಕುಡಿದು ಎಸೆಯುತಿರುವುದು ರೈತಜನರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ಅವರು ತೋಟಗಳಿಲ್ಲಿ ಬೆಳೆದ ಸಿಯಾಳವನ್ನು ಸಾಲು ಸಾಲಾಗಿ ಲಗ್ಗೆ ಇಟ್ಟು ತಿಂದು ಎಲ್ಲೆಂದರಲ್ಲಿ ಎಸೆಯುತ್ತಿರುವುದಲ್ಲದೇ, ಓಡಿಸಲು ಹೊದರೆ ಮನುಷ್ಯರಿಗೆ ಹೆದರಿಸುತ್ತಿವೆ.
ದೊಂಬೆಯ ಕಾವೇರಿ ಎಂಬುವವರ ಮನೆಯ ತೋಟವೊಂದರಲ್ಲಿಯೇ 2 ತಿಂಗಳಿನಲ್ಲಿ ಸುಮಾರು 1,000ಕ್ಕೂ ಹೆಚ್ಚು ಎಳನೀರನ್ನು ಮಂಗಗಳು ಕುಡಿದು ಎಸೆದಿವೆ. ಮರದ ಕೆಳಗೆ ನಿಂತು ಓಡಿಸಲು ಹೋದರೆ ಮನೆಯವರನ್ನು ಗದರಿಸುವುದಲ್ಲದೇ ಹಲ್ಲೆಗೂ ಮುಂದಾಗುತ್ತವೆ. ಹೀಗಾಗಿ ಮಂಗಗಳು ತೆಂಗಿನ ಮರಗಳಿಗೆ ಲಗ್ಗೆ ಇಟ್ಟಾಗ ಮನೆಯಿಂದ ಹೊರಬಂದು ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಮನೆಯವರು ಹೆದರುತ್ತಿದ್ದಾರೆ. 2 ತಿಂಗಳಿನಿಂದಲೂ ಇಲ್ಲಿನ ಮನೆಗಳಿಗಳಲ್ಲಿ ಇದು ನಿರಂತರವಾಗಿ ಸಾಗಿದೆ. ಈಗ ತೆಂಗು ಬೆಳೆ ನಾಶಪಡಿಸುತ್ತಿರುವ ಮಂಗಗಳು ಗದ್ದೆಗಳಲ್ಲಿ ಪೈರು ಬೆಳೆದು ನಿಲ್ಲುತ್ತಿದ್ದಂತೆ ಅಲ್ಲಿಗೂ ಲಗ್ಗೆ ಇಡುತ್ತವೆ.
ಅರಣ್ಯ ಇಲಾಖೆಗೆ ಏನೂ ಮಾಡಲಾಗದಂತೆ!
ಸಮಸ್ಯೆ ಇಷ್ಟು ಗಂಭೀರವಾಗಿದ್ದರೂ ಈ ಭಾಗದ ಜನಪ್ರತಿನಿಧಿಗಳಾಗಲೀ, ಬೈಂದೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಾಗಲೀ ಒಂದಿಷ್ಟು ತಲೆಕೆಡಿಸಿಕೊಂಡಂತಿಲ್ಲ. ಇಲ್ಲಿನ ಜನರೆಲ್ಲ ಒಟ್ಟಾಗಿ ಇಲಾಖೆಗೆ ದೂರು ಕೊಂಡೊಯ್ದರೇ ನಮಗೇನೂ ಮಾಡಲು ಸಾಧ್ಯವಿಲ್ಲ ನಿಮ್ಮ ಮಂತ್ರಿಗಳಿಗೆ ಹೇಳಿ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ. ಮನವಿಯನ್ನು ಸ್ವೀಕರಿಸದೇ ಹಿಂದೆ ಕಳುಹಿಸಿದ್ದಾರೆ. ಇದರಿಂದಾಗಿ ಜನರೂ ಈ ಕಪಿಚೇಷ್ಟೆಯಿಂದಾಗಿ ದಾರಿ ಕಾಣದೆ ಕಂಗೆಟ್ಟಿದ್ದಾರೆ.
ದುಡಿಮೆ ಕಸಿದುಕೊಂಡಿದೆ:
ಈ ಭಾಗದ ಕೆಲವು ಮನೆಗಳಲ್ಲಿ ಜೀವನೋಪಾಯಕ್ಕಾಗಿ ತೆಂಗಿನಕಾಯಿ ಮಾರಿಕೊಂಡು ಒಂದಿಷ್ಟು ಸಂಪಾದಿಸುತ್ತಿದ್ದರು. ಈ ಮಂಗಗಳ ಕಾಟದಿಂದಾಗಿ ಈಗ ಅದೂ ಕೂಡ ಸಾಧ್ಯವಾಗುತ್ತಿಲ್ಲ. ತೆಂಗಿನ ಮರದ ಎಳೆಯ ಬೊಂಡಗಳನ್ನೇ ಮಂಗಗಳು ತಿಂದು ಎಸೆಯುತ್ತಿರುವುದರಿಂದ ಕಾಯಿಯಾಗುವವರೆಗೆ ಕಾಯುವುದು ದೂರದ ಮಾತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಈ ಭಾಗದ ಜನರ ಸಮಸ್ಯೆಗೊಂದು ಪರಿಹಾರ ದೊರಕಿಸಿಕೊಡಬೇಕಿದೆ.
ಮಡಾಮಕ್ಕಿಯಿಂದ-ಸಿದ್ಧಾಪುರದ ವರೆಗೂ ವಾನರ ಸೇನೆ:
ಅತ್ತ ಅಮಾಸೆಬೈಲು, ಮಡಾಮಕ್ಕಿ, ಶಂಕರನಾರಾಯಣ, ಗೋಳಿಯಂಗಡಿ, ಹಾಲಾಡಿ, ಸಿದ್ಧಾಪುರ, ಶೇಡಿಮನೆಯ ಸುತ್ತಿಲಿನ ಪ್ರದೇಶಗಳಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ. ಇಲ್ಲಿನ ತೆಂಗು, ಬಾಳೆ ತೋಟಗಳಿಗೆ ಲಗ್ಗೆ ಇಡುತ್ತಿರುವ ಮಂಗಗಳು ಅಪಾರ ಕೃಷಿ ಸಂಪತ್ತನ್ನು ನಾಶ ಮಾಡುತ್ತಿವೆ. ಇಷ್ಟೇಕ್ಕೆ ಮುಗಿಯದೆ ಇಲ್ಲಿನ ಮನೆಗಳಿಗೂ ಭಯವಿಲ್ಲದೇ ನುಗ್ಗುತ್ತಿದೆ. ಗುಂಪು ಗುಂಪಾಗಿ ಲಗ್ಗೆ ಇಡುವ ಮಂಗಗಳು ಬೆಳೆ ನಾಶಪಡಿಸುವುದಲ್ಲದೇ ಓಡಿಸಲು ಹೋಗುವವರ ಮೇಲೆ ದಾಳಿಗೂ ಮುಂದಾಗುತ್ತದೆ. ಇದರಿಂದಾಗಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಹೆದರಿ ಸಂಚರಿಸುವಂತಾಗಿದೆ.
ಎಲ್ಲಿಂದ ಬಂದವು ಈ ಮಂಗಗಳು:
ಬೇರೆಡೆಯೂ ಹೀಗೆಯೇ ಉಪಟಳ ನೀಡುವ ಮಂಗಗಳನ್ನು ಹಿಡಿದು ಯಾರೋ ಈ ಭಾಗಗಳಲ್ಲಿ ಬಿಟ್ಟು ಹೋಗಿದ್ದಾರೆ ಎಂಬುದು ಸ್ಥಳೀಯರು ಆರೋಪ. ಅವು ವಲಸೆ ಬರುವ ಬದಲಿಗೆ ಒಮ್ಮೆಲೇ ಈ ಭಾಗದಲ್ಲಿ ಕಾಣಿಸಿಕೊಂಡದ್ದರಿಂದ ಅವರು ಹೀಗೆ ಹೇಳುತ್ತಿದ್ದಾರೆ. ಕಾಡು ನಾಶವಾಗುತ್ತಿರುವುದರಿಂದ ಮಂಗಗಳು ಊರಿಗೆ ಲಗ್ಗೆ ಇಡುವುದು ಇತ್ತಿಚಿಗೆ ತೀರಾ ಸಾಮಾನ್ಯವೆನಿಸಿವೆ.
ನಮ್ಮ ತೋಟದ ತೆಂಗಿನ ಮರದಿಂದ 2 ತಿಂಗಳಿನಲ್ಲಿ ಒಂದು ಸಾವಿರಲ್ಲೂ ಅಧಿಕ ಬೊಂಡಗಳನ್ನು ಮಂಗಗಳು ತಿಂದು ಎಸೆದಿವೆ. ಓಡಿಸಲು ಹೋದರೆ ನಮ್ಮನ್ನೇ ಬೆದರಿಸುತ್ತವೆ. ಎಲ್ಲೆಂದರಲ್ಲಿ ಬೊಂಡಗಳನ್ನು ಬಿಸಾಡುತ್ತಲಿದೆ. ಮೊನ್ನೆ ಮೊನ್ನೆ ಮಂಗವನ್ನು ಓಡಿಸಲು ಹೋದ ನನ್ನ ತಂಗಿಯ ಮೇಲೆಯೇ ಹಲ್ಲೆ ನಡೆಸಿತ್ತು. ಇವುಗಳ ಕಾಟದಿಂದಾಗಿ ಮನೆಯ ಹೊರಗಡೆ ನಿಲ್ಲುವುದೇ ಕಷ್ಟವೆಂಬಂತಾಗಿದೆ. -ಕಾವೇರಿ, ದೊಂಬೆ ನಿವಾಸಿ
ಚಿತ್ರ ವರದಿ: ಸುನಿಲ್ ಹೆಚ್. ಜಿ. ಬೈಂದೂರು




















