ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಭೆ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮೋಹನ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ವೇಳೆ ಪ್ರಗತಿ ಪರಿಶೀಲನೆ ಮಾಡಿದ ಅಧ್ಯಕ್ಷರು, ಅನ್ನ ಭಾಗ್ಯ ಯೋಜನೆಯಡಿ ಇದುವರೆಗೆ 22313 ಬಿಪಿಎಲ್ ಫಲಾನುಭವಿಗಳಿಗೆ 477720 ಕ್ವಿಂಟಾಲ್ ಅಕ್ಕಿ ಹಾಗೂ 3219 ಅಂತ್ಯೋದಯ ಫಲಾನುಭವಿಗಳಿಗೆ 85525 ಕ್ವಿಂಟಾಲ್ ಅಕ್ಕಿ ವಿತರಿಸಿರುವ ಕುರಿತು ಪ್ರಗತಿ ಪರಿಶೀಲನೆ ಮಾಡಿದರು ನಂತರ ಶಿರೂರು ಹಡವಿನಕೋಣೆಯಲ್ಲಿ ಹೊಸದಾಗಿ ಪಡಿತರ ವಿತರಣಾ ಕೇಂದ್ರ ಆರಂಭಿಸಲು, ಮುಂದಿನ ವಾರದೊಳಗೆ ಅನುಮತಿ ಸಿಗುವುದಾಗಿ ಸಭೆಯಲ್ಲಿ ಅಧ್ಯಕ್ಷರು ತಿಳಿಸಿದರು.
ಗೃಹ ಲಕ್ಷ್ಮಿ ಯೋಜನೆಯಡಿ ಫೆಬ್ರವರಿ ಮಾಹೆಯವರೆಗೆ ಫಲಾನುಭವಿಗಳ ಖಾತೆಗೆ ಅನುದಾನ ಜಮೆ ಆಗಿದ್ದು, ಎಪ್ರಿಲ್ ಮಾಹೆಯ ಗೃಹಲಕ್ಷ್ಮಿ ಅನುದಾನ ಜುಲೈ ಮಾಹೆಯಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಆಗಿರುವುದಾಗಿ ಹಾಗೂ ಮಾರ್ಚ ಮೇ ಜೂನ್ ಮಾಹೆಯ ಹಣ ಪಾವತಿಗೆ ಬಾಕಿ ಇರುವುದಾಗಿ ಅಧಿಕಾರಿಗಳು ನೀಡಿದ ಪ್ರಗತಿ ವರದಿಯನ್ನು ಅಧ್ಯಕ್ಷರು ಪರಿಶೀಲನೆ ಕೈಗೊಂಡರು.
ಗೃಹಲಕ್ಷ್ಮಿ ಯೋಜನೆಯ ಮರಣಹೊಂದಿದ ಫಲಾನುಭವಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿ, ಇದುವರೆಗೆ ಸಮೀಕ್ಷೆ ಪ್ರಕಾರ ಬೈಂದೂರು ಕುಂದಾಪುರ ತಾಲೂಕಿನಲ್ಲಿ ಇದುವರೆಗೆ ಒಟ್ಟು 25079 ಮರಣಹೊಂದಿದ ಪಲಾನುಭವಿಗಳ ಖಾತೆಗೆ ಒಟ್ಟು ರೂ 77.44 ಲಕ್ಷ ಗೃಹಲಕ್ಷ್ಮಿ ಅನುದಾನ ಜಮೆಯಾಗಿದ್ದು, ಅದರಲ್ಲಿ ಸುಮಾರು 29.00 ಲಕ್ಷದಷ್ಟು ಅನುದಾನ ಸಂಬಂಧಪಟ್ಟ ಬ್ಯಾಂಕ್ನಿಂದ ಸರ್ಕಾರಕ್ಕೆ ಮರು ಜಮೆ ಆಗಿದ್ದು, ಉಳಿದ 22.00 ಲಕ್ಷದಷ್ಟು ಅನುದಾನ ಸರ್ಕಾರಕ್ಕೆ ಮರು ಜಮೆ ಮಾಡಲು ಬಾಕಿ ಇರುವುದಾಗಿ ಅಧಿಕಾರಿಗಳು ಉತ್ತರಿಸಿದರು. ಹಾಗೂ ಕೆಲವೊಂದು ಫಲಾನುಭವಿಗಳ 02 ಖಾತೆಗೆ ಅನುದಾನ ಜಮೆ ಆಗಿರುವ ಬಗ್ಗೆ ಸುದ್ದಿ ಆಗಿದ್ದು, ಇದನ್ನು ಪರಿಶೀಲನೆ ಕೈಗೊಂಡಾಗ ಒಂದು ಫಲಾನುಭವಿಯು ಗೃಹಲಕ್ಷ್ಮಿ ಆರಂಭದ ಆಧಾರ ಲಿಂಕ್ ಆದ ಬ್ಯಾಂಕ್ ಖಾತೆಗೆ ಅನುದಾನ ಜಮೆ ಆಗಿದ್ದು, ತದನಂತರ ದಿನಗಳಲ್ಲಿ ಸದ್ರಿ ಫಲಾನುಭವಿಯು ಹೊಸ ಖಾತೆ ತೆರೆದಾಗಿ ಆ ಖಾತೆಗೂ ಆಧಾರ್ ಲಿಂಕ್ ಮಾಡಿದಾಗ ಆಧಾರ್ ಲಿಂಕ್ ಆದ ಹೊಸ ಖಾತೆಗೆ ಗೃಹಲಕ್ಷ್ಮಿ ಅನುದಾನ ಜಮೆ ಆಗಿದ್ದರಿಂದ ಒಬ್ಬ ಫಲಾನುಭವಿಯ 02 ಖಾತೆಗೆ ಅನುದಾನ ಜಮೆ ಆಗಿರುವುದು ತಂತ್ರಾಂಶದಲ್ಲಿ ತೋರಿಸುತ್ತದೆ ಆದರೆ ಅನುದಾನ ಫಲಾನುಭವಿಯ 02 ಖಾತೆಗೂ ಜಮೆ ಆಗಿರುವುದಿಲ್ಲ ಎಂಬುದಾಗ ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಮೆಸ್ಕಾಂ ಇಲಾಖೆ ವ್ಯಾಪ್ತಿಯಲ್ಲಿ ಪಟ್ಟು 29239 ಗೃಹಜ್ಯೋತಿ ಫಲಾನುಭವಿಗಳಿದ್ದು, ಇಲ್ಲಿಯವರೆಗೆ 19356 ಫಲಾನುಭವಿಗಳ ಸರ್ವೆ ಆಗಿದ್ದು, 9883 ಫಲಾನುಭವಿಗಳ ಸರ್ವೆ ಕಾರ್ಯ ಬಾಕಿ ಇರುವುದಾಗಿ ಹಾಗೂ ತಲ್ಲೂರು ಮೆಸ್ಕಾಂ ಇಲಾಖಾ ವ್ಯಾಪ್ತಿಯಲ್ಲಿ 5353 ಫಲಾನುಭವಿಗಳಲ್ಲಿ 3815 ಫಲಾನುಭವಿಗಳ ಸರ್ವೆ ಕಾರ್ಯ ಮುಗಿದಿದ್ದು, 1538 ಬಾಕಿ ಇರುವುದಾಗಿ ಇದಕ್ಕೆ ಎಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯರು ಸಹಕಾರ ನೀಡುವಂತೆ ಅಧಿಕಾರಿಗಳು ಸಭೆಯಲ್ಲಿ ಕೋರಿದರು.
ಶಕ್ತಿ ಯೋಜನೆಯಡಿ ಜೂನ್ ವರೆಗೆ ರೂ 89,56,43,432.00 ಖರ್ಚಾಗಿರುವ ಪ್ರಗತಿ ವರದಿಯನ್ನು ಅಧ್ಯಕ್ಷರು ಪರಿಶೀಲನೆ ಕೈಗೊಂಡು ಹಳ್ಳಿಹೊಳೆ ಕೊಲ್ಲೂರು ಮಾರ್ಗವಾಗಿ ಬೈಂದೂರು ಕೇಂದ್ರ ಸ್ಥಾನಕ್ಕೆ ಸರ್ಕಾರಿ ಬಸ್ಸು ಓಡಿಸುವ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಇದುವರೆಗೂ ಯಾವ ಕ್ರಮನೂ ಆಗಿರುವುದಿಲ್ಲ. ಬೈಂದೂರು ವಿಧಾನ ಸಭಾ ಕ್ಷೇತ್ರದ ಅರ್ಧ ಭಾಗದ ಮಹಿಳೆಯರಿಗೆ ಮಕ್ಕಳಿಗೆ ಶಕ್ತಿ ಯೋಜನೆಯ ಲಾಭ ಇನ್ನೂ ಸಿಗಲಿಲ್ಲ. ಇದರಿಂದಾಗಿ ಕೊಲ್ಲೂರು ಜಡ್ಕಲ್ ಮುದೂರು ಹಳ್ಳಿಹೊಳೆ ಭಾಗದ ಜನರಿಗೆ ಅನ್ಯಾಯವಾಗಿದೆ ಈ ಮಾರ್ಗಕ್ಕೆ ಒಂದು ಬಸ್ಸನ್ನಾದರೂ ನೀಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ತಿಳಿಸಿದರು. ಹಾಗೂ ಈಗಾಗಲೇ ಕುಂದಾಪುರ ಕೊಲ್ಲೂರು ಮಾರ್ಗವಾಗಿ ಮಂತ್ರಾಲಯಕ್ಕೆ ಈಗಾಗಲೇ ಸ್ಲೀಪರ್ ಸರ್ಕಾರಿ ಬಸ್ ಓಡಿಸಲಾಗುತ್ತಿದೆ. ಈ ಬಸ್ಸನ್ನು ಕುಂದಾಪುರ ಬೈಂದೂರು ಕೊಲ್ಲೂರು ಮಾರ್ಗವಾಗಿ ಮಂತ್ರಾಲಯಕ್ಕೆ ಓಡಿಸುವ ಬಗ್ಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನಾಗಶಯನ ಪಿ.ಸಿ. ಅವರು ಉಪಸ್ಥಿತರಿದ್ದರು.
















