ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯಲ್ಲಿ ಬುಧವಾರದಂದು ಗುರುಪೂರ್ಣಿಮೆಯನ್ನು ಶ್ರದ್ಧಾ – ಭಕ್ತಿಯಿಂದ ಆಚರಿಸಲಾಯಿತು.
ಶಾಲೆಯ ಸಹ ಶಿಕ್ಷಕರಾದ ರಾಮಕೃಷ್ಣ ಉಡುಪರು ಶಾಸ್ತ್ರೋಕ್ತವಾಗಿ ಮಂತ್ರಗಳನ್ನು ಪಠಿಸಿ ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆಯನ್ನು ನೆರವೇರಿಸುವುದರ ಜೊತೆಗೆ ಮಕ್ಕಳಿಗೆ ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಮಹತ್ವದ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗುರ್ವಷ್ಟಕ, ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿ ಗುರುವಿನ ಮಹಿಮೆಯನ್ನು ತಿಳಿಸಿಕೊಡುವ ಹಾಡನ್ನು ಹಾಡಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ಶಾಲೆಯಲ್ಲಿ ಈ ರೀತಿಯ ಆಚರಣೆಯು ವಿದ್ಯಾರ್ಥಿಗಳಲ್ಲಿ ಗುರುಭಕ್ತಿಯನ್ನು ತುಂಬಿ, ಸಾಂಸ್ಕೃತಿಕ ಮೌಲ್ಯಗಳ ಪರಿಚಯವನ್ನು ಮೂಡಿಸಿ ಶಿಸ್ತನ್ನು ಬೆಳೆಸಲು ಪೂರಕವಾಗಿರುತ್ತದೆ.
ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಸಲಹೆಗಾರರಾದ ಸುಜಾತಾ ಸದಾರಾಮ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಹೇಮಮಾಲಿನಿ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
















