ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದಿನ ಪದವಿ ಶಿಕ್ಷಣದಲ್ಲಿ ಕೌಶಲ್ಯ ಸಂಪಾದನೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಮಹತ್ವ ಕೊಡಲಾಗುತ್ತಿದ್ದು ಸಕಾರಾತ್ಮಕ ಚಿಂತನೆಯೊಂದಿಗೆ ಶಿಸ್ತುಬದ್ಧ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಭವಿಷ್ಯದ ಸತ್ಪ್ರಜೆಗಳಾಗುತ್ತಾರೆ. ದೀಪದ ಬೆಳಕು ಮನೆಯನ್ನು ಬೆಳೆಗಿದರೆ, ಜ್ಞಾನದ ಬೆಳಕು ಮನವನ್ನು ಬೆಳಗುತ್ತದೆ. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನ ಜ್ಞಾನದ ಬೆಳಕಿನಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಉಡುಪಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಘು ನಾಯ್ಕ್ ನುಡಿದರು.
ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ ಇಲ್ಲಿ ಐಕ್ಯೂಎಸಿ ಸಹಯೋಗದೊಂದಿಗೆ ಹಮ್ಮಿಕೊಂಡ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಎಸ್ಇಪಿ ಶಿಕ್ಷಣ ಪದ್ಧತಿ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಾಗರಾಜ ವೈದ್ಯ ಎಂ. ಶಿಸ್ತು ಮತ್ತು ಸಮಯಪಾಲನೆಯೊಂದಿಗೆ ಶಿಕ್ಷಣ ಪಡೆದು, ಕಾಲೇಜಿನ ನಿಯಮಗಳನ್ನು ಪಾಲಿಸಿ ಇಲ್ಲಿನ ಮೂಲಭೂತ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಸಿಂಚನಾ ಮತ್ತು ತಂಡದವರು ಪ್ರಾರ್ಥಿಸಿದರು. ಇತ್ತೀಚಿಗೆ ವಿವಿಧ ಸರಕಾರಿ ಕಾಲೇಜುಗಳಿಂದ ವರ್ಗಾವಣೆಗೊಂಡು ಈ ಕಾಲೇಜಿನ ಕರ್ತವ್ಯಕ್ಕೆ ಹಾಜರಾದ ಒಂಭತ್ತು ಮಂದಿ ಪ್ರಾಧ್ಯಾಪಕರನ್ನು ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಎ ಪ್ರಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ವಿದ್ಯಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಐಕ್ಯೂಎಸಿ ಸಂಚಾಲಕರಾದ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಮೋಹಿನಿ ಅತ್ತಿಮನಿ ವಂದಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
















