ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಸೆ.29: ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಎಂಬಲ್ಲಿ ಸೌಪರ್ಣಿಕಾ ನದಿಯ ಸಮೀಪ ಇಬ್ಬರು ವ್ಯಕ್ತಿಗಳ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೃತರನ್ನು ಚಾರ್ಸಾಲು ನಿವಾಸಿ ವಿಠ್ಠಲ ನಾಯ್ಕ್ (36 ವರ್ಷ) ಹಾಗೂ ಹೊಸೂರು ಗ್ರಾಮದ ದರುಕೋಡು ನಿವಾಸಿ ಭವ್ಯಾ ಅಲಿಯಾಸ್ ನಿಶ್ಮಿತಾ (33 ವರ್ಷ) ಎಂದು ಗುರುತಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಇವರ ವಿರುದ್ಧ ವಿಠ್ಠಲ ನಾಯ್ಕನ ಮಡದಿಗೆ ವಿಷಪ್ರಾಶನಗೈದು ಕೊಲೆ ಮಾಡಲು ಯತ್ನಿಸಿದ ಆರೋಪ ಎದುರಾಗಿತ್ತು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಸೆ.11ರಂದು ದೂರು ದಾಖಲಾಗಿತ್ತು.
ಆಟೋ ಚಾಲಕನಾಗಿದ್ದ ವಿಠ್ಠಲ ನಾಯ್ಕ್ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಚಾರ್ಸಾಲುವಿನಲ್ಲಿ ವಾಸವಿದ್ದ. ಈ ನಡುವೆ ಟೈಲರ್ ವೃತ್ತಿ ಮಾಡಿಕೊಂಡಿದ್ದ ಭವ್ಯಾಳ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಇದಕ್ಕೆ ಅಡ್ಡಿಯಾಗಿದ್ದ ಪತ್ನಿಯನ್ನು ಹತ್ಯೆಗೈಯುವ ಸಂಚು ರೂಪಿಸಿದ್ದರು ಎನ್ನಲಾಗಿದೆ. ಅದರಂತೆ ಭವ್ಯಾಳನ್ನು ನರ್ಸ್ ಎಂದು ಪರಿಚಯಿಸಿ ಇಂಜೆಕ್ಷನ್ ನೀಡಲಾಗಿತ್ತು. ಇದರಿಂದ ವಿಠ್ಠಲನ ಪತ್ನಿ ಅಸ್ವಸ್ಥಗೊಂಡಿದ್ದು, ಕುಟುಂಬಿಕರು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಪತ್ನಿ ಚೇತರಿಸಿಕೊಳ್ಳುವ ವಿಚಾರ ತಿಳಿದು, ಪ್ರೇಮಿಗಳಿಬ್ಬರೂ ಮೈಸೂರಿಗೆ ಪರಾರಿಯಾಗಿದ್ದರು ಎನ್ನಲಾಗಿದೆ. ಕೆಲ ದಿನಗಳಲ್ಲಿ ಕೊಲ್ಲೂರು ಭಾಗದಲ್ಲಿ ಕಾಣಿಸಿಕೊಂಡು ನಾಪತ್ತೆಯಾಗಿದ್ದರು. ಇಂದು ಹಾಲ್ಕಲ್ ಸಮೀಪದ ಚಾರ್ಸಲ್ ಎಂಬಲ್ಲಿ ನದಿ ಬದಿಯಲ್ಲಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಇಬ್ಬರು ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸುಮಾರು 15 ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಈ ಬಗ್ಗೆ ಪೊಲೀಸರು ತನಿಕೆ ಕೈಗೆತ್ತಿಕೊಂಡಿದ್ದು, ಸೋಕೋ ತಂಡ ಪರಿಶೀಲನೆ ನಡೆಸಿದೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ.
















