ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಅಭಿಯಾನದಡಿ ಆಯೋಜಿಸಲಾದ “ಅಂಗನ್ ಕಾ ಮಿಲನ್” ಕಾರ್ಯಕ್ರಮವು ಬೆಳ್ವೆಯ ವಾಸುಕಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಅವರು ವಹಿಸಿ, ಮಾತನಾಡಿ, “ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಆರೋಗ್ಯ ಮತ್ತು ಸಂಸ್ಕಾರದ ಮೊದಲ ದೀಪ. ಅವರ ಸೇವೆಯನ್ನು ಗುರುತಿಸುವುದೇ ಈ ಮಿಲನ್ ಕಾರ್ಯಕ್ರಮದ ಉದ್ದೇಶ. ಸೇವೆಯೇ ಸಂಘಟನೆ ಎಂಬ ಮಂತ್ರದೊಂದಿಗೆ ಮಹಿಳಾ ಮೋರ್ಚಾ ನಿರಂತರವಾಗಿ ಕೆಲಸ ಮಾಡುತ್ತಿದೆ” ಎಂದರು.
ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ ಅವರು ಮಾತನಾಡಿ, “ಮೋದಿಜಿ ಅವರ ನೇತೃತ್ವದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಶಕ್ತಿ ಬಂದಿದೆ. ಅಂಗನವಾಡಿ ವ್ಯವಸ್ಥೆಯನ್ನು ಭವಿಷ್ಯದ ಭಾರತ ಕಟ್ಟುವ ಸಂಸ್ಕಾರ ಕೇಂದ್ರ ಎಂದು ಪರಿಗಣಿಸಿ ಕೆಲಸ ಮಾಡುತ್ತಿರುವ ಮಹಿಳಾ ಮೋರ್ಚಾದ ಪ್ರಯತ್ನ ಶ್ಲಾಘನೀಯ” ಎಂದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಮಾತನಾಡಿ, “ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ, ಸುಕನ್ಯಾ ಸಮೃದ್ಧಿ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗಳು ಅಂಗನವಾಡಿಗಳ ಮೂಲಕವೇ ಕೊನೆಯ ಮಗುವನ್ನು ತಲುಪುತ್ತಿವೆ. ಮೋದಿಜಿ ಅವರ 25 ವರ್ಷಗಳ ಸೇವಾ ಪಯಣ ಅಂತ್ಯೋದಯದಿಂದ ಸರ್ವೋದಯದತ್ತ ಸಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಕಲಿಕಾ ಪರಿಕರ ವಿತರಿಸಲಾಯಿತು ಹಾಗೂ ಕೇಂದ್ರ ಸರ್ಕಾರದ ಫಲಾನುಭವಿಗಳ ಅನಿಸಿಕೆ ಆಲಿಸಲಾಯಿತು.
ವೇದಿಕೆಯಲ್ಲಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಜಿಲ್ಲಾ ಸೇವಾ ಸಂಕಲ್ಪ ಸಂಚಾಲಕ ದಿನಕರ್ ಶೆಟ್ಟಿ ಹೆರ್ಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ರೇಷ್ಮಾ ಉದಯ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಗಿರೀಶ್ ಅಂಚನ್, ಶಿವಕುಮಾರ್ ಅಂಬಲ್ಪಾಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್, ಸ್ಥಳೀಯ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ರಾಧಾ ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಷಾ ಶೆಟ್ಟಿ ಸ್ವಾಗತಿಸಿ, ಕುಂದಾಪುರ ಮಂಡಲ ಯುವ ಮೋರ್ಚಾ ಉಪಾಧ್ಯಕ್ಷ ಸುದರ್ಶನ್ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಜ್ಯೋತಿ ರಮೇಶ್ ವಂದಿಸಿದರು.
















