ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ. ಶಾಂತಾರಾಮ ಸಾಹಿತ್ಯ ಪ್ರಶಸ್ತಿಗೆ ಶ್ರೀಧರ ಬಳಗಾರ ಅವರ ‘ಮಾರ ಮಿಂದನುʼ ಕಥಾ ಸಂಕಲನ ಆಯ್ಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಗಾರಿನಲ್ಲಿ ಜನಿಸಿದ ಶ್ರೀಧರ ಬಳಗಾರ ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಟೀಚರ್ ಎಜುಕೇಟೆರ್ ಆಗಿ ಪಾಠ ಮಾಡುತ್ತ ಸದ್ಯ ಕುಮಟಾದಲ್ಲಿ ನೆಲೆಸಿದ್ದಾರೆ.
‘ಅಧೋಮುಖ'(1995), ‘ಮುಖಾಂತರ’ (1998), ‘ಇಳೆ ಎಂಬ ಕನಸು’ (2003), ಒಂದು ಫೋಟೋದ ನೆಗೆಟಿವ್”(2008), ‘ಈಸಾಡತಾವ ಜೀವ'(2015), ‘ಮಾಲತಿ ಮಾತಾಡಿದಳು'(2023), ‘ಮಾರ ಮಿಂದನು'(2025), ಕಥಾ ಸಂಕಲನಗಳು. ‘ಕೇತಕಿಯ ಬನ'(2003), ‘ಆಡುಕಳ'(2014), ‘ಮೃಗಶಿರ'(2019), ‘ವಿಸರ್ಗ'(2023), ‘ಬಲಿಪಾದ'(2026), ಕಾದಂಬರಿಗಳು. ‘ರಥಬೀದಿ'(2009), ‘ಕಾಲಪಲ್ಲಟ'(2011) ಅಂಕಣ ಬರಹಗಳು. ‘ಮೊಳೆದಷ್ಟು ಹೂವು'(2019) ಲೇಖನ ಸಂಗ್ರಹ. ಕುವೆಂಪು ಭಾಷಾ ಭಾರತಿಗೆ ಪೀಟರ್ ವ್ಯಾಟ್ಸನ್ ಮತ್ತು ನಿರ್ಮಲ್ ವರ್ಮಾರವರ ಆಯ್ದ ಬರಹಗಳ ಅನುವಾದ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಸ್ವಾತಂತ್ರ್ಯೋತ್ತರ ಕನ್ನಡ ಚಿಂತನಾತ್ಮಕ ಲೇಖನಗಳ ಸಂಪಾದನೆ ಮಾಡಿ ಕೊಟ್ಟಿದ್ದಾರೆ. ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಉರ್ದು ಭಾಷೆಗೆ ಭಾಷಾಂತರಗೊಂಡಿವೆ. ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪದವಿ ಪಠ್ಯಕ್ಕೆ ಸೇರ್ಪಡೆಯಾಗಿವೆ. ಕೆಲವು ಕಥೆಗಳನ್ನು ರಂಗ ರೂಪಕ್ಕೆ ಅಳವಡಿಸಲಾಗಿದೆ.
ಬಳೆಗಾರ ಅವರಿಗೆ ಮೂರು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಮಾಸ್ತಿ ಪುರಸ್ಕಾರ, ನಿರಂಜನ ಸಾಹಿತ್ಯ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್.ಅನಂತಮೂರ್ತಿ ಕಥಾ ಪ್ರಶಸ್ತಿ, ದ.ರಾ.ಬೇಂದ್ರೆ ಸಾಹಿತ್ಯ ಪುರಸ್ಕಾರ, ವಾರಂಬಳ್ಳಿ ಪ್ರತಿಷ್ಠಾನ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಡಾ.ಬೆಸಗರಹಳ್ಳಿ ರಾಮಣ್ಣ ಸಂಸ್ಮರಣಾ ಸಾಹಿತ್ಯ ಪ್ರಶಸ್ತಿ, ಅಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ, ‘ಅಮ್ಮ’ ಪ್ರಶಸ್ತಿ ಮತ್ತು ಬರಗೂರು ಪುಸ್ತಕ ಪ್ರಶಸ್ತಿ ಪುರಸ್ಕೃತರು ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















