ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಬುಧವಾರದಂದು ಗುರುಪೂರ್ಣಿಮೆಯ ಪ್ರಯುಕ್ತ ವ್ಯಾಸಪೂಜೆಯು ಹಟ್ಟಿಅಂಗಡಿ ಡಾ. ಹೆಚ್. ಶಾಂತಾರಾಮ್ ಸಭಾಂಗಣದಲ್ಲಿ ನಡೆಯಿತು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕವೃಂದದವರು ಉಪಸ್ಥಿತರಿದ್ದರು.
ಶಾಲೆಯ ಸಂಸ್ಕೃತ ಅಧ್ಯಾಪಕರಾದ ರಾಮಕೃಷ್ಣ ಉಡುಪರು ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸುತ್ತಾ, ಗುರುಗಳು ತಮ್ಮ ಗುರುಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸುವ ಈ ಪವಿತ್ರ ದಿನದಲ್ಲಿ, ಜಗತ್ತಿನ ಆದಿಗುರುಗಳಾದ ವೇದವ್ಯಾಸ ಮಹರ್ಷಿಗಳನ್ನು ಭಕ್ತಿಪೂರ್ವಕವಾಗಿ ಸ್ಮರಿಸುವುದು ನಮ್ಮೆಲ್ಲರ ಭಾಗ್ಯ. ವೇದಗಳನ್ನು ಸಂಗ್ರಹಿಸಿ, ಅವುಗಳನ್ನು ಸುಲಭವಾಗಿ ಅಧ್ಯಯನ ಮಾಡಲು ವ್ಯವಸ್ಥಿತಗೊಳಿಸಿದ ಮಹಾನುಭಾವರು ವೇದವ್ಯಾಸರು.
ಹದಿನೆಂಟು ಪುರಾಣಗಳ ಮೂಲಕ ದೇವರು, ಧರ್ಮ, ಭಕ್ತಿ ಮತ್ತು ಸನ್ಮಾರ್ಗದ ಸಂದೇಶವನ್ನು ಜನಮಾನಸಕ್ಕೆ ತಲುಪಿಸಿದ ಶ್ರೇಷ್ಠ ಗುರು ಅವರೇ. ಉಪನಿಷತ್ತುಗಳ ಸಾರವನ್ನು ಲೋಕಕ್ಕೆ ಪರಿಚಯಿಸಿದ ವೇದವ್ಯಾಸರು, ಮಹಾಭಾರತ, ಭಗವದ್ಗೀತೆ, ವಿಷ್ಣು ಸಹಸ್ರನಾಮ ಮುಂತಾದ ಅಮೂಲ್ಯ ಆಧ್ಯಾತ್ಮಿಕ ಸಂಪತ್ತನ್ನು ಮಾನವಕುಲಕ್ಕೆ ನೀಡಿದ ಮಹಾಗುರು. ಅವರ ಉಪದೇಶಗಳು ಜ್ಞಾನ, ಧರ್ಮ, ಕರ್ತವ್ಯ ಮತ್ತು ಭಕ್ತಿಯ ಮಾರ್ಗವನ್ನು ಬೆಳಗುತ್ತವೆ. ಅಂತಹ ಆದರ್ಶ ಗುರುವಿನ ಗುಣಗಳನ್ನು ನಮ್ಮ ಶಿಕ್ಷಕರಲ್ಲಿ ಕಾಣಬೇಕು. ಶಿಕ್ಷಕರನ್ನು ಗೌರವಿಸಿ, ಅವರೊಂದಿಗೆ ವಿನಯ, ಶಿಸ್ತು ಮತ್ತು ಆದರದಿಂದ ವರ್ತಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ. ಗುರುಗಳಿಗೆ ಸಲ್ಲಿಸುವ ಗೌರವವು ಕೇವಲ ಸಂಪ್ರದಾಯವಲ್ಲ; ಅದು ನಮ್ಮ ವ್ಯಕ್ತಿತ್ವ, ಸಂಸ್ಕಾರ ಮತ್ತು ಸ್ವಾಭಿಮಾನವನ್ನು ಬೆಳೆಸುವ ಶ್ರೇಷ್ಠ ಮೌಲ್ಯವಾಗಿದೆ ಎಂದು ಹಿತನುಡಿದರು.
ಗುರುವಿನ ಅಷ್ಟಕವನ್ನು ವಿದ್ಯಾರ್ಥಿಗಳು ಏಕಕಂಠದಿಂದ ಹಾಡಿ ಆನಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್., ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
















