ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಹಲವಾರು ಕ್ರಿಮಿನಲ್ ಪ್ರಕರಣಗಳಿಗೆ, ಅಪಘಾತಗಳಿಗೆ ಮಾದಕ ದ್ರವ್ಯ ಕಾರಣವಾಗುತ್ತಿದೆ. ಯುವ ಜನತೆ ಇತ್ತೀಚಿಗೆ ಪಬ್, ಬಾರ್, ಗಾಂಜಾ, ಅಫೀಮು ಮೊದಲಾದ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಅದರ ಮೂಲಕ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ. ಹೀಗಾಗಿ ಯಾರು ಕೂಡ ತಪ್ಪು ದಾರಿ ಹಿಡಿದು ಇಡೀ ಮನೆಯನ್ನು ಸ್ಮಶಾನ ಮಾಡಬಾರದೆಂಬ ಉದ್ದೇಶದಿಂದ ಮಾದಕ ವಸ್ತು ಹಾಗೂ ಮಾದಕ ದ್ರವ್ಯಗಳ ಬಗ್ಗೆ ಮಾಹಿತಿಯನ್ನು ನೀಡಿ, ಜಾಗೃತಿ ಮೂಡಿಸುವ ಕೆಲಸವನ್ನು ಸರಕಾರ ಮತ್ತು ಇನ್ನಿತರ ಸಂಘ ಸಂಸ್ಥೆಗಳು ನಿರಂತರವಾಗಿ ಮಾಡುತ್ತಿದೆ ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪವನ್ ನಾಯಕ್ ಹೇಳಿದರು.

ಅವರು ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ತಾಲೂಕು, ಜನಜಾಗೃತಿ ವೇದಿಕೆ ತ್ರಾಸಿ ವಲಯ ಮತ್ತು ಎಸ್. ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಎಸ್.ವಿ. ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಹಿತಿ ನೀಡಿದರು.
ದುಶ್ಚಟಗಳಿಗೆ ಬಲಿಯಾದವರ ಮನಪರಿವರ್ತನೆ ಮಾಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಅವರನ್ನು ಗೌರವದಿಂದ ನಡೆಸಿಕೊಳ್ಳುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಭಾರತದ ಯುವಜನತೆಯನ್ನು ದಾರಿತಪ್ಪಿಸಿ ಯುವ ಸಂಪತ್ತನ್ನು ಕಸಿದು ಕೊಳ್ಳುವ ಪ್ರಯತ್ನ ನಡೆಯುತ್ತಿದೆ. ದುಶ್ಚಟಗಳಿಗೆ ದಾಸರಾಗುವುದರಿಂದ ನಮ್ಮ ವೈಯಕ್ತಿಕ ಬೆಳವಣಿಗೆ ಕುಂಠಿತವಾಗುತ್ತದೆ. ಮನೆಗಳು ಸ್ಮಶಾನವಾಗುತ್ತದೆ, ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುತ್ತದೆ ಎಂದರು.
ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರಶಾಂತ ಖಾರ್ವಿ ಉಪಸ್ಥಿತರಿದ್ದರು.
ಜನಜಾಗೃಗತಿ ವೇದಿಕೆ ಸದಸ್ಯ ಬಿ. ರಾಘವೇಂದ್ರ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತ್ರಾಸಿ ವಲಯ ಮೇಲ್ವಿಚಾರಕ ಭರತ್ ಪಟಕಾರ್ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಸುಜಾತಾ ಕಾರ್ಯಕ್ರಮ ನಿರ್ವಹಿಸಿ, ದಿವ್ಯಶ್ರೀ ಆಚಾರ್ಯ ವಂದಿಸಿದರು.
















