ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳಿಗೆ ಶಿಕ್ಷಣ ಮಾತ್ರವಲ್ಲದೆ ಕೃಷಿ ಚಟುವಟಿಕೆಗಳ ಬಗೆಗಿನ ಅರಿವನ್ನು ಮೂಡಿಸಿ ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಶಿಷ್ಟ ಶೈಲಿಯ ಕಾರ್ಯಕ್ರಮ ʼಕ್ರಿಯೇಟಿವ್ ಕೆಸರ್ಡೊಂಜಿ ದಿನ 2026ʼ ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ವಿಜೃಂಭಣೆಯಿಂದ ಜರುಗಿತು.
ರಾಜರಾಜೇಶ್ವರಿ ಸಂಸ್ಥೆಯ ಸಂಸ್ಥಾಪಕರಾದ ದೇವಿ ಪ್ರಸಾದ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕರಣಕ್ಕಾಗಿ ಪ್ರಕೃತಿಯನ್ನು ನಾಶ ಮಾಡದೆ ಅದನ್ನು ಉಳಿಸಿಕೊಂಡು ಹೋಗಬೇಕು. ಈ ಭೂಮಿ ನಮಗೆ ನೀರು, ಗಾಳಿ, ಅನ್ನವನ್ನು ನೀಡಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಭೂಮಿತಾಯಿಗೆ ಸದಾ ಋಣಿಗಳಾಗಿರಬೇಕು. ನಮ್ಮ ಬದುಕಿನ ಸ್ವಲ್ಪ ಭಾಗವಾದರೂ ಪ್ರಕೃತಿಗೋಸ್ಕರ ದೇಶಕ್ಕೋಸ್ಕರ ಮೀಸಲಿಡಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ರವೀಂದ್ರ ಪ್ರಭು ಕಡಾರಿ ಅವರು ಮಾತನಾಡಿ, ಹಿರಿಯರು ಈ ಮಣ್ಣಿನೊಂದಿಗೆ ಹೋರಾಟವನ್ನು ನಡೆಸಿ ತಮ್ಮ ಬದುಕನ್ನು ಕಟ್ಟಿಕೊಂಡವರು. ಪ್ರಕೃತಿ ಪರಂಪರೆಯನ್ನು ಉಳಿಸುವ ಕಾರ್ಯಕ್ರಮವನ್ನು ಕ್ರಿಯೇಟಿವ್ ಸಂಸ್ಥೆ ವಿದ್ಯಾರ್ಥಿಗಳಿಂದ ಮಾಡಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ನುಡಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್. ಅವರು ಮಾತನಾಡಿ, ಮನುಷ್ಯನು ಉನ್ನತಿಯತ್ತ ಸಾಗುತ್ತಿದ್ದಂತೆ ಕೃಷಿ ಮತ್ತು ಪ್ರಕೃತಿಯಿಂದ ದೂರವಾಗುತ್ತಾ ಬರುತ್ತಿದ್ದಾನೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಹಮ್ಮಿಕೊಂಡಿರುವ ಕಾರ್ಯಕ್ರಮವು ಮಕ್ಕಳಲ್ಲಿ ಕೃಷಿಯ ಬಗ್ಗೆ ಅರಿವನ್ನು ಮೂಡಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ರೈತರ ಶ್ರಮವೇನು ಎನ್ನುವುದನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳಬೇಕು ಮತ್ತು ಈ ತುಳುನಾಡಿನ ಸಂಸ್ಕೃತಿಯನ್ನು ಅರಿತುಕೊಳ್ಳಬೇಕೆನ್ನುವ ಸದುದ್ದೇಶದಿಂದ ಸತತ ಐದು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸುತ್ತ ಕಾರ್ಯಕ್ರಮದ ಉದ್ದೇಶ ತಿಳಿಸುತ್ತಾ, ವಿದ್ಯಾರ್ಥಿಗಳಲ್ಲಿ ಪ್ರಕೃತಿ ಮತ್ತು ಪರಿಸರದ ಬಗ್ಗೆ ತಿಳಿದುಕೊಳ್ಳುವ ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವಿದು ಎಂದು ಸಂಸ್ಥೆಯ ಸಹಸಂಸ್ಥಾಪಕರಾದ ಹಾಗೂ ಈ ಕಾರ್ಯಕ್ರಮದ ರೂವಾರಿಗಳಾದ ಡಾ. ಗಣನಾಥ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯರಾದ ಸಂತೋಷ್ ಕುಮಾರ್ ಶೆಟ್ಟಿ, ಯೋಗೇಶ್ ಗಿಣಿ ಹಾಗೂ ಸಹಸಸ್ಥಾಪಕರಾದ ಅಮೃತ್ ರೈ ಯು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕರಾದ ಲೋಹಿತ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಸಂತೋಷ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ತುಳು ನಾಡಿನ ವಿವಿಧ ಖಾದ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಮನೋರಂಜನೆಯ ಆಟಗಳು ಜರುಗಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
















