ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಣ, ಆಡಳಿತ, ಸಂಘಟನೆ, ಜಾನಪದ ಹೀಗೆ ಹಲವು ಕ್ಷೇತ್ರಗಳಲ್ಲಿ ಅನುಪಮ ಸಾಧನೆ, ಸಿದ್ಧಿಗಳಿಂದ ಖ್ಯಾತರಾಗಿದ್ದ ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ-2026ಕ್ಕೆ ಜಾನಪದದ ಪ್ರಸಿದ್ಧ ವಿದ್ವಾಂಸ, ಸಂಶೋಧಕ ಹಾಗೂ ಲೇಖಕರಾದ ಡಾ. ಕನರಾಡಿ ವಾದಿರಾಜ ಭಟ್ ಆಯ್ಕೆಯಾಗಿದ್ದಾರೆ.
ಡಾ. ಕನರಾಡಿ ಭಟ್ ಅವರು ಕರಾವಳಿಯ ಕನ್ನಡ ಮತ್ತು ತುಳು ಸಾಹಿತ್ಯದ ಹಿರಿಯ ಚಿಂತಕರಾಗಿದ್ದಾರೆ. 1951ರ ಜು.2ರಂದು ಉಡುಪಿ ಜಿಲ್ಲೆಯ ಮಣಿಪುರ ಗ್ರಾಮದ ಕನರಾಡಿಯಲ್ಲಿ ಲಕ್ಷ್ಮೀನಾರಾಯಣ ಭಟ್ ಮತ್ತು ಕಮಲಮ್ಮ ದಂಪತಿ ಪುತ್ರರಾಗಿ ಜನಿಸಿದ ಅವರು ಬಾಲ್ಯದಿಂದಲೇ ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಅಧ್ಯಯನದತ್ತ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದರು.
ಶಿಕ್ಷಣದೊಂದಿಗೇ ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದು, ಕರಾವಳಿಯ ಸಾಂಸ್ಕೃತಿಕ ಪರಂಪರೆಯ ಅಧ್ಯಯನ ಮತ್ತು ದಾಖಲಾತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಪಾಡ್ದನಗಳು, ಜೋಕ್ಲೆ ಪದೋಕ್ಲು, ತುಳು ಜನಪದ ಕತೆಗಳು, ಮೂಕಜ್ಜಿ, ಮಗೆ ಬರೆವು ಕಲ್ತೆ, ಮೂಕಾಂಬಿಕಾ ಕ್ಷೇತ್ರ ಕೊಲ್ಲೂರು ಮುಂತಾದುವು ಅವರ ಖ್ಯಾತ ಪ್ರಕಟಣೆಗಳಾಗಿವೆ. ಯಕ್ಷದಿಪಿಕ, ಹಸನ್ಮುಖಿ, ಅಜ್ಜಿ ಸಾಕಿದ ಮಗ, ಬನದ ಸಿರಿ, ಕರ್ನಾಟಕ ದರ್ಶನ, ಅಮೃತ ಪುರುಷ ಮುಂತಾದವು ಅವರ ಸಂಪಾದಿತ ಕೃತಿಗಳು. 150ಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಆಕಾಶವಾಣಿಯಲ್ಲಿ ನಾಟಕ, ವಿಚಾರಗೋಷ್ಠಿ, ದೂರದರ್ಶನದಲ್ಲಿ ಜನಪದ ಕಾರ್ಯಕ್ರಮ, ಪ್ರವಚನ ನೀಡಿದ್ದಾರೆ. ಇವರ ‘ಬಸ್ರೂರು ಅಧ್ಯಯನ’ ಗ್ರಂಥವು ಮಂಗಳೂರು ವಿ.ವಿ. ಪ್ರಾದೇಶಿಕ ಅಧ್ಯಯನ ವಿಷಯಕ್ಕೆ ಪಠ್ಯವಾಗಿದೆ. ಕನ್ನಡ ಜನಪದ ನಿಘಂಟುವಿಗೆ ಉಡುಪಿ ಜಿಲ್ಲೆಯ ಜಾನಪದ ತಜ್ಞರಾಗಿಯೂ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 20 ಸಾವಿರ ರೂ. ನಗದು ಹಾಗೂ ಫಲಕ ಒಳಗೊಂಡಿದೆ. ಪ್ರದಾನ ಕಾರ್ಯಕ್ರಮ ಸದ್ಯದಲ್ಲೇ ನಿಗದಿಯಾಗಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















