ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಬಟ್ಟೆ ಜೋಡಿಸುವ ವಿಚಾರವಾಗಿ ಸಹೋದರಿಯೊಂದಿಗೆ ಗಲಾಟೆ ಮಾಡಿಕೊಂಡು, ತಾಯಿ ಬೈದರೆಂಬ ಕಾರಣಕ್ಕೆ ಸಿಟ್ಟಾದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.
ಬೆಳ್ಳಾಲ ಗ್ರಾಮದ ಗಂಗಮಾತಾ ನಿವಾಸಿ ಚಂದ್ರಾವತಿ ಹಾಗೂ ಪ್ರಭಾಕರ ನಾಯಕ್ ದಂಪತಿಯ 18 ವರ್ಷದ ಪುತ್ರಿ ಪ್ರಮಿತಾ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಗುರುವಾರದಂದು ಬೆಳಗ್ಗಿನ ಜಾವ ರೂಮಿನಲ್ಲಿ ಬಟ್ಟೆಗಳನ್ನು ಇಡುವ ವಿಚಾರವಾಗಿ ಪ್ರಮಿತಾ ಮತ್ತು ಆಕೆಯ ತಂಗಿಯ ನಡುವೆ ಮಾತುಕತೆ ನಡೆದು ಗಲಾಟೆಯಾಗಿತ್ತು. ಇದನ್ನು ಗಮನಿಸಿದ ತಾಯಿ ಚಂದ್ರಾವತಿ ಇಬ್ಬರಿಗೂ ಬೈದು ಗಲಾಟೆಯನ್ನು ಬಿಡಿಸಿದ್ದರು. ಇದರಿಂದ ಕೋಪಗೊಂಡ ಸಿಡುಕು ಸ್ವಭಾವದ ಪ್ರಮಿತಾ, ಕೊಠಡಿಗೆ ತೆರಳಿ ಒಳಗಿನಿಂದ ಬಾಗಿಲ ಚಿಲಕ ಹಾಕಿಕೊಂಡಿದ್ದಳು.
ತಾಯಿ ಕೆಲಸಕ್ಕೆ ತೆರಳಿದ ಬಳಿಕ, ಬೆಳಿಗ್ಗೆ 08:30ರ ಸುಮಾರಿಗೆ ಪ್ರಮಿತಾಳ ಸಹೋದರ ತಾಯಿಗೆ ಕರೆ ಮಾಡಿ, ಅಕ್ಕ ಬಾಗಿಲು ತೆಗೆಯುತ್ತಿಲ್ಲ ಮತ್ತು ಮಾತನಾಡುತ್ತಿಲ್ಲ ಎಂದು ತಿಳಿಸಿದ್ದಾನೆ. ಗಾಬರಿಗೊಂಡ ತಾಯಿ ಕೂಡಲೇ ಸಂಬಂಧಿ ವಿಶ್ಲೇಶ್ ಎಂಬುವರಿಗೆ ಕರೆ ಮಾಡಿ ಮನೆಗೆ ತೆರಳುವಂತೆ ತಿಳಿಸಿದ್ದಾರೆ.
ವಿಶ್ಲೇಶ್ ಬೆಳಿಗ್ಗೆ 08:45ಕ್ಕೆ ಮನೆಗೆ ಬಂದು ಕೊಠಡಿಯ ಹಿಂಭಾಗದ ಕಿಟಕಿಯಿಂದ ಪರಿಶೀಲಿಸಿದಾಗ, ಪ್ರಮಿತಾ ಕೋಣೆಯ ಫ್ಯಾನ್‌ಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ತಾಯಿ ಚಂದ್ರಾವತಿ ಸ್ಥಳಕ್ಕೆ ಆಗಮಿಸಿ ನೋಡಿದಾಗ ಮಗಳು ಮೃತಪಟ್ಟಿರುವುದು ದೃಢಪಟ್ಟಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















