ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ, ಬ್ರಹ್ಮಾವರ, ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಸಿ.ಎಸ್.ಐ. ಲೊಂಬಾರ್ಡ್ ಮಿಷನ್ ಆಸ್ಪತ್ರೆ ಹಾಗೂ ರುಡ್‌ಸೆಟ್ ಆಸರೆ ಸಂಘಟನೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭವು ರುಡ್‌ಸೆಟ್ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು, ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉದ್ಯಮಿಗಳು ಹಾಗೂ ಕೊಡುಗೈ ದಾನಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರುಡ್‌ಸೆಟ್ ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತರಬೇತಿ ಪಡೆಯುತ್ತಿರುವುದನ್ನು ಗಮನಿಸಿ ಸಂತಸ ವ್ಯಕ್ತಪಡಿಸಿದರು. ಹಿಂದಿನ ಕಾಲದಲ್ಲಿ ಮಹಿಳೆಯರು ಕೆಲವು ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಸೀಮಿತರಾಗಿದ್ದರು. ಆದರೆ ಇಂದು ಮಹಿಳೆಯರು ಮುಂದೆ ಬಂದು ವಿವಿಧ ಕೌಶಲ್ಯಗಳನ್ನು ಪಡೆದುಕೊಂಡು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ವ್ಯವಹಾರದಲ್ಲಿ ಕೇವಲ ಲಾಭಗಳಿಸುವುದಷ್ಟೇ ಮುಖ್ಯವಲ್ಲ; ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕುವುದು ಕೂಡ ಅತ್ಯಂತ ಮುಖ್ಯ. ವ್ಯವಹಾರದಲ್ಲಿ ತಾಳ್ಮೆ, ಪ್ರಾಮಾಣಿಕತೆ ಹಾಗೂ ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಹೊಂದಿದ್ದಲ್ಲಿ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ ಎಂದು ಅವರು ತಿಳಿಸಿದರು.
ನಾವು ನಮ್ಮ ವಾಹನವನ್ನು ಅತ್ಯಂತ ಕಾಳಜಿಯಿಂದ ಪ್ರತಿತಿಂಗಳಿಗೊಮ್ಮೆ ಪರಿಶೀಲಿಸುತ್ತೇವೆ. ಆದರೆ ನಮ್ಮದೇ ದೇಹ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಇದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಮುಖ್ಯವಾಗಿ ನಮ್ಮ ಆರೋಗ್ಯ ಉತ್ತಮವಾಗಿರಬೇಕು. ಈ ನಿಟ್ಟಿನಲ್ಲಿ ಸಮಾಜಮುಖಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ. ಎಲ್ಲರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಮಾತನಾಡಿ, ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಕೆಲಸದ ಒತ್ತಡದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದನ್ನು ಮರೆತುಬಿಡುತ್ತೇವೆ. ಆದ್ದರಿಂದ “ಆರೋಗ್ಯವೇ ಸಂಪತ್ತು” ಎಂಬ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಂಡು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು. ಇಂತಹ ಉತ್ತಮ ಅವಕಾಶವನ್ನು ಕಲ್ಪಿಸಿರುವ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಹರೀಶ್ ಜಿ., ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯ ದಾಸ್, ಸಿ.ಎಸ್.ಐ. ಲೊಂಬಾರ್ಡ್ ಮಿಷನ್ ಆಸ್ಪತ್ರೆ ಡಾ. ಕೆವಿನ್ ಪಾಂಡ್ಯನ್, ರುಡ್‌ಸೆಟ್ ಆಸರೆ ಅಧ್ಯಕ್ಷ ರಾಮಚಂದ್ರ ಆಚಾರ್ ಜಯಂಟ್ಸ್ ಗ್ರೂಪ್ ಕಾರ್ಯದರ್ಶಿ ಮಿಲ್ಟನ್ ಅಲೋವೆರಾ ವಿಘ್ನೇಶ್ವರ ಪ್ರಿಂಟರ್ಸ್ ಮಾಲಕ ಮಹೇಶ್ ಕುಮಾರ್ ಮಲ್ಪೆ, ಬ್ರಹ್ಮಾವರ ಅವಿರಾಗ್ ಸ್ಟುಡಿಯೋ ಮಾಲಕ ರಾಜೇಶ್ ದೇವಾಡಿಗ, ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿವಿಧ ಸಂಸ್ಥೆಯ ಪದಾಧಿಕಾರಿಗಳು, ಇನ್ನಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಅಂಗವಾಗಿ ರುಡ್ಸೆಟ್ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದಿರುವ ಯಶಸ್ವಿ ಉದ್ಯಮಿಗಳಿಗೆ ರುಡ್ಸೆಟ್ ಬಜಾರ್‌ನ ಮೂಲಕ ಮಾರುಕಟ್ಟೆ ಅವಕಾಶವನ್ನು ಹಮ್ಮಿಕೊಳ್ಳಲಾಗಿತ್ತು.
ಜಯಂಟ್ಸ್ ಗ್ರೂಪ್ ಅಡ್ವೈಸರ್ ಮಧುಸೂಧನ್ ಗ್ರೂಪ್ ಪ್ರಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಚೈತ್ರ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ಜಯಂಟ್ಸ್ ಯೂನಿಟ್ ನಿರ್ದೇಶಕ ಸುಂದರ್ ಪೂಜಾರಿ ಸ್ವಾಗತಿಸಿ, ಜಯಂಟ್ಸ್ ಹಿರಿಯ ಉಪನ್ಯಾಸಕರಾದ ಸಂತೋಷ್ ಶೆಟ್ಟಿ ವಂದಿಸಿದರು.
















