ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮೀಣ ಬದುಕಿನ ಸೊಗಡು, ಕೃಷಿ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಕ್ರೀಡೆಗಳನ್ನು ಪರಿಚಯಿಸುವ ಮತ್ತು ಉಳಿಸಿ ಬೆಳೆಸುವ ಉದ್ದೇಶದಿಂದ ಕಾಲೇಜು ಅಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹೊಸಂಗಡಿ ಇವರ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಹೊಸಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರದಂದು ʼಹೂಂಟಿ ಗದ್ದೆಗೆ ಆಟ’ ಎಂಬ ವಿಶಿಷ್ಟ ಗ್ರಾಮೀಣ ಕ್ರೀಡಾಕೂಟವು ಸಂಭ್ರಮ ಸಡಗರದಿಂದ ನಡೆಯಿತು
ʼಮಣ್ಣಿನ ಮಡಿಲಲ್ಲಿ ಒಂದ್ ದಿನʼ ಎಂಬ ಆಶಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು. ಕೆಸರಿನ ಗದ್ದೆಯಲ್ಲಿ ನಡೆದ ವಿವಿಧ ಗ್ರಾಮೀಣ ಆಟಗಳಲ್ಲಿ ಸ್ಪರ್ಧಾಳುಗಳು ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಸಂಭ್ರಮಿಸಿದರು.
ಆಧುನಿಕ ಜೀವನಶೈಲಿಯ ನಡುವೆ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು ಮತ್ತು ಕೃಷಿ ಸಂಸ್ಕೃತಿಯನ್ನು ಯುವಜನರಿಗೆ ಪರಿಚಯಿಸುವಲ್ಲಿ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು. ಮಣ್ಣಿನೊಂದಿಗೆ ಬೆರೆತು, ನಗುತ್ತಾ, ಆಟವಾಡುತ್ತಾ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಆಸ್ವಾದಿಸಿದರು.
ಕಾರ್ಯಕ್ರಮಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ನೈತಿಕ ಬೆಂಬಲ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಹಾಗೂ ಉದಯ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಜೋಗಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವಿಶ್ವನಾಥ್ ತುಂಬಿಕಲ್ಲಾಯ, ಶ್ರೀಕರ್ ನಾಯಕ್, ಮಾಲತಿ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಕಾರ್ಯಕ್ರಮಕ್ಕೆ ಅಗತ್ಯವಾದ ಗದ್ದೆಯನ್ನು ಮಂಜುನಾಥ್ ಗೊಲ್ಲ, ಕಂಠಗದ್ದೆ ಅವರು ನೀಡಿ ಸಹಕರಿಸಿದರು. ಊಟದ ವ್ಯವಸ್ಥೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಚಂದ್ರಜೋಗಿ ಅವರು ಸಹಕರಿಸಿದರು. ಕಾರ್ಯಕ್ರಮದ ಸಮಗ್ರ ಉಸ್ತುವಾರಿಯನ್ನು ರವಿ ಶೆಟ್ಟಿಹುಣ್ಸೇಡಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಅವರು ವಹಿಸಿಕೊಂಡರು.
ನರಸಿಂಹ ಸೌಂಡ್ ಲೈಟಿಂಗ್ಸ್ ವತಿಯಿಂದ ಧ್ವನಿವರ್ಧಕ ಹಾಗೂ ಕಾಲಬೈರವ ಶಾಮಿಯಾನದಿಂದ ವ್ಯವಸ್ಥೆಗೆ ಸಹಕಾರ ದೊರೆಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರಂಜಿತ್ ಕುಮಾರ್ ಶೆಟ್ಟಿ ಅವರು ಗ್ರಾಮೀಣ ಕ್ರೀಡೆಗಳ ಮಹತ್ವವನ್ನು ತಿಳಿಸಿದರು.
ಕಾಲೇಜಿನ ಉಪನ್ಯಾಸಕರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಎನ್‌ಎಸ್‌ಎಸ್ ಸ್ವಯಂಸೇವಕರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
ಗ್ರಾಮೀಣ ಕ್ರೀಡೆಗಳ ಮೂಲಕ ಪರಂಪರೆ, ಸಂಸ್ಕೃತಿ, ಒಗ್ಗಟ್ಟು ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರಿದ ‘ಹೂoಟಿ ಗದ್ದೆಗೆ ಆಟ’ಕಾರ್ಯಕ್ರಮವು ಊರಿನವರ ಮೆಚ್ಚುಗೆಗೆ ಪಾತ್ರವಾಯಿತು.
















