ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆ, ಸಂಸ್ಕೃತಿ, ಆಚರಣೆ, ಆಹಾರ ಪದ್ಧತಿಗಳನ್ನು ತಿಳಿಸುವ ಪ್ರಯತ್ನ ಶ್ಲಾಘನೀಯವಾಗಿದ್ದು, ಸುಮಾರು 123 ಕುಂದಾಪುರದ ವಿಶೇಷ ಖಾದ್ಯಗಳನ್ನು ವಿದ್ಯಾರ್ಥಿಗಳು ಸ್ಪರ್ಧೆಯೊಂದಲ್ಲಿ ಪ್ರದರ್ಶಿಸಿದ್ದು ಸಂಸ್ಥೆಯ ಪ್ರೋತ್ಸಾಹದ ಪ್ರತೀಕ ಎಂದು ಕಂಡ್ಲೂರಿನ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಎ. ಜಯಕರ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ಕುಂದಗನ್ನಡ ಸಂಘದ ಜಂಟಿ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಆಸಾಡಿ ಖಾದ್ಯಗಳ ತಯಾರಿ ಮತ್ತು ಪ್ರದರ್ಶನ ಸ್ಪರ್ಧೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕೈಲ್ಕೆರೆ-ಮೊಳಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಡ್ಡರ್ಸೆ ಸಂತೋಷ್ ಶೆಟ್ಟಿ, ಕುಂದಗನ್ನಡ ಭಾಷೆಯ ಚಿಂತಕ ರಾಮ್ ಶೆಟ್ಟಿ ಅತ್ತಿಕಾರ್ ತೀರ್ಪುಗಾರರಾಗಿ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭ ಹೌದರಾಯನ ವಾಲ್ಗದ ಮೂಲಕ ಜನಪ್ರಿಯರಾದ ಹಿರಿಯ ಜಾನಪದ ಕಲಾವಿದ ಶ್ರೀ ಮಂಜು ಪೂಜಾರಿ ಬನ್ನಾಡಿಯವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ, ರೇಷ್ಮಾ ಶೆಟ್ಟಿ, ಕುಂದಗನ್ನಡ ಸಂಘದ ಸಂಯೋಜಕಿ ರಶ್ಮಿತಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಥ್ವಿ ಸ್ವಾಗತಿಸಿ, ದೀಪ್ತಿ ವಂದಿಸಿ, ಮನೀಷಾ ಮತ್ತು ಆದಿತ್ಯ ಭತ್ತ ಕುಟ್ಟುವ ಹಾಡನ್ನು ಹೇಳಿದರು. ಶರಣ್ಯ ಶೆಟ್ಟಿ ನಿರೂಪಿಸಿದರು. ಆಸಾಡಿ ಖಾದ್ಯ ತಯಾರಿಯಲ್ಲಿ 21 ತಂಡಗಳಲ್ಲಿ ವಿದ್ಯಾರ್ಥಿಗಳು ವಿನೂತನವಾಗಿ ಭಾಗವಹಿಸಿದ್ದರು.
















