ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮದಲ್ಲಿ ರಾಷ್ಟ್ರಪ್ರೇಮದ ಸಂದೇಶ ಸಾರಿದ ಸಾಲಿಗ್ರಾಮ ಕಯಾಕಿಂಗ್ ತಂಡ ರಾಷ್ಟ್ರಪ್ರೇಮವನ್ನು ಪ್ರತಿಯೊಬ್ಬರ ಹೃದಯದಲ್ಲಿ ಬಿತ್ತುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ, ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸುವ ಸಂಕಲ್ಪದೊಂದಿಗೆ ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಸಾಲಿಗ್ರಾಮ ಕಯಾಕಿಂಗ್ ತಂಡ ಪ್ರತಿವರ್ಷದಂತೆ ಈ ಬಾರಿಯೂ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ರಾಷ್ಟ್ರಪ್ರೇಮವನ್ನು ಮೆರೆಯುವ ಪ್ರಯತ್ನ ಮಾಡಿದೆ. ಸೀತಾ ನದಿಯಲ್ಲಿ ಕಯಾಕಿಂಗ್ ಮೂಲಕ ಪ್ರಕೃತಿಯ ಅದ್ಭುತ ಸೌಂದರ್ಯವನ್ನು ಜನರಿಗೆ ಪರಿಚಯಿಸುವುದರ ಜೊತೆಗೆ, ಪ್ರಕೃತಿ ಪ್ರೇಮದೊಂದಿಗೆ ದೇಶಪ್ರೇಮವನ್ನೂ ಬೆಳೆಸುವ ಸಂದೇಶವನ್ನು ಸಾರುತ್ತಿರುವ ಸಾಲಿಗ್ರಾಮ ಕಯಾಕಿಂಗ್ ತಂಡ, ಈ ಬಾರಿ ಮತ್ತೊಂದು ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.
ಹಿಂದೆ ಸೀತಾ ನದಿಯ ಮಧ್ಯಭಾಗಕ್ಕೆ ಕಯಾಕಿಂಗ್ ಮೂಲಕ ತೆರಳಿ ಧ್ವಜಸ್ತಂಭ ನೆಟ್ಟು ಧ್ವಜಾರೋಹಣ ನಡೆಸಿದ್ದ ತಂಡ, ಮತ್ತೊಮ್ಮೆ ನದಿಯ ಮಧ್ಯದಲ್ಲಿರುವ ಕಾಂಡ್ಲಾ ಮರಗಳ ನಡುವೆ ಸೇತುವೆ ನಿರ್ಮಿಸಿ ಅದರ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರಕೃತಿಯ ಮಡಿಲಲ್ಲಿ ದೇಶಭಕ್ತಿಯ ಸಂದೇಶ ಸಾರಿತ್ತು.
ಈ ಬಾರಿ ಇನ್ನಷ್ಟು ಹೊಸತನವನ್ನು ಮೆರೆದ ತಂಡ, “ಬದುಕು ಕೊಟ್ಟ ನಾಡ ಮಣ್ಣಲಿ, ಬಂಧಗಳ ಸೇತುವೆ ಕಟ್ಟಿ, ದೇಶಭಕ್ತಿಯ ನೂಲ ಬಿಗಿದು, ನಾಡಿನ ಹೆಮ್ಮೆ ಮೇಲೇಳಲಿ” ಎಂಬ ಆಶಯದೊಂದಿಗೆ, ನೀರಿನ ಆರ್ಭಟದ ನಡುವೆ ಸುಂದರವಾದ ಮರದ ಸೇತುವೆಯೊಂದನ್ನು ನಿರ್ಮಿಸಿ, ಅದರ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ವಿಶಿಷ್ಟವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು.
ಪ್ರತಿವರ್ಷವೂ ನವೀನ ಆಲೋಚನೆಗಳ ಮೂಲಕ ಸಮಾಜಕ್ಕೆ ವಿಭಿನ್ನ ಸಂದೇಶ ನೀಡುತ್ತಿರುವ ಸಾಲಿಗ್ರಾಮ ಕಯಾಕಿಂಗ್ ತಂಡ, ಈ ಬಾರಿ ಕೂಡ ಪ್ರಕೃತಿ ಮಡಿಲಲ್ಲೇ ಭಾರತಾಂಬೆಯನ್ನು ಪ್ರತಿಷ್ಠಾಪಿಸಿ, ಪ್ರಕೃತಿ ಪ್ರೇಮದ ಜೊತೆಗೆ ದೇಶಪ್ರೇಮವನ್ನೂ ಬೆಳೆಸಿಕೊಳ್ಳುವಂತೆ ಜನರಿಗೆ ಕರೆ ನೀಡಿತು.
ನಮ್ಮ ನಾಡು, ನಮ್ಮ ನದಿ, ನಮ್ಮ ಪ್ರಕೃತಿ ಮತ್ತು ನಮ್ಮ ರಾಷ್ಟ್ರಧ್ವಜ — ಇವೆಲ್ಲವನ್ನೂ ಒಂದೇ ವೇದಿಕೆಯಲ್ಲಿ ಬೆಸೆಯುವ ಮೂಲಕ ಸಾಲಿಗ್ರಾಮ ಕಯಾಕಿಂಗ್ ತಂಡದ ಈ ಪ್ರಯತ್ನವು ಸ್ವಾತಂತ್ರ್ಯ ದಿನಾಚರಣೆಗೆ ಮತ್ತಷ್ಟು ಅರ್ಥಪೂರ್ಣ ಮೆರುಗು ನೀಡಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಕಯಾಕಿಂಗ್‌ನ ಮುಖ್ಯಸ್ಥರಾದ ಮಿಥುನ್ ಕುಮಾರ್ ಮೆಂಡನ್, ಲೋಕೇಶ್ ಸೇರಿದಂತೆ ತಂಡದ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
















