ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್ ಸಮೀಪ ರಾ.ಹೆ.66ರಲ್ಲಿ ಲಾರಿಯೊಂದು ರಸ್ತೆ ಬದಿಗೆ ಮಗುಚಿ ಬಿದ್ದಿದ್ದು, ಹೆದ್ದಾರಿ ಬದಿಯಲ್ಲಿ ವಾಸಿಸುತ್ತಿದ್ದ ವಲಸೆ ಕೂಲಿ ಕಾರ್ಮಿಕರು ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಶನಿವಾರ ಸಂಭವಿಸಿದೆ.
ಬೈಂದೂರಿನಿಂದ ಕುಂದಾಪುರ ಕಡೆಗೆ ಮೀನು ತುಂಬಿಸಿ ಸಾಗುತ್ತಿದ್ದ ಲಾರಿಯೊಂದು ಮುಳ್ಳಿಕಟ್ಟೆ ಜಂಕ್ಷನ್ ಸಮೀಪ ಅದೇ ಮಾರ್ಗದಲ್ಲಿ ಮುಂದೆ ಹೋಗುತ್ತಿದ್ದ ಇನ್ನೊಂದು ಲಾರಿಗೆ ಢಿಕ್ಕಿ ಹೊಡೆದು ವಲಸೆ ಕಾರ್ಮಿಕರು ವಾಸಿಸುತ್ತಿರುವ ಟೆಂಟ್ ಸಮೀಪದಲ್ಲೇ ರಸ್ತೆ ಬದಿಯ ಚರಂಡಿಗೆ ಮಗುಚಿ ಬಿದ್ದಿದೆ.
ಚರಂಡಿ ಇಲ್ಲದಿದ್ದರೆ ಲಾರಿ ನೇರವಾಗಿ ರಾ.ಹೆದ್ದಾರಿ ಸಮೀಪ ಕೂಲಿ ಕಾರ್ಮಿಕರು ವಾಸಿಸುತ್ತಿದ್ದ ಟೆಂಟ್‌ಗಳ ಮೇಲೆ ಬಿದ್ದು, ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇತ್ತು. ಅಪಘಾತ ನಡೆಯುವ ಕೆಲವೇ ಕ್ಷಣದ ಮುಂಚೆ ರಾ.ಹೆ. ಗುತ್ತಿಗೆ ಪಡೆದುಕೊಂಡಿರುವ ಸಂಸ್ಥೆಯವರು ವಾಹನದಲ್ಲಿ ಇದೇ ಸ್ಥಳದಲ್ಲಿ ಕೂಲಿ ಕಾರ್ಮಿಕರನ್ನು ಇಳಿಸಿ ಹೋಗಿದ್ದರು.











