ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಹಾಗೂ ಸಂಘಟಿತ ಪ್ರಯತ್ನಗಳ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಉಪ್ಪುಂದ ದೇವಾಡಿಗರ ಸಂಘ ರಿ. ಮಹಿಳಾ ಘಟಕದ ನೇತೃತ್ವದಲ್ಲಿ ಕೆರ್ಗಾಲ್‌ನ ಮಟ್ನಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ‘ಅರಿಶಿನ ಕುಂಕುಮ ಹಾಗೂ ಆರೋಗ್ಯ ಮಾಹಿತಿ ಕಾರ್ಯಾಗಾರ’ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಮಚಂದ್ರ ದೇವಾಡಿಗ ವಹಿಸಿದ್ದರು.

ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ಗಿರಿಜಾ ದೇವಾಡಿಗ ಮಾತನಾಡಿ, “ಅರಿಶಿನ ಕುಂಕುಮವು ಮಹಿಳೆಯರಿಗೆ ಸೌಭಾಗ್ಯದ ಸಂಕೇತವಾಗಿದೆ. ನಮ್ಮ ಹಿಂದೂ ಸಮಾಜದಲ್ಲಿ ಯಾರಾದರೂ ಅರಿಶಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಿ ಆಹ್ವಾನಿಸಿದಾಗ ಮಹಿಳೆಯರು ಪ್ರೀತಿಯಿಂದ ಭಾಗವಹಿಸುತ್ತಾರೆ. ಇಂತಹ ಕಾರ್ಯಕ್ರಮಗಳು ಮಹಿಳೆಯರ ನಡುವೆ ಆತ್ಮೀಯತೆ ಹಾಗೂ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುತ್ತವೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಿಯದರ್ಶಿನಿ ದೇವಾಡಿಗ ಹಾಗೂ ಸಂಘದ ಗೌರವಾಧ್ಯಕ್ಷರಾದ ಶ್ರೀ ರವೀಂದ್ರ ಎಚ್. ದೇವಾಡಿಗ ಮಹಿಳಾ ಘಟಕದ ಕಾರ್ಯದರ್ಶಿ ಸೀತಾ ದೇವಾಡಿಗ ಮಹಾಬಲೇಶ್ವರ, ಉಪಾಧ್ಯಕ್ಷೆಯರಾದ ಸೀತು ದೇವಾಡಿಗ ಮೂರ್ತಿಮನೆ ಹಾಗೂ ಸವಿತಾ ದೇವಾಡಿಗ ಕೋಣ್ಕಿಮನೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ಪ್ರಾಥಮಿಕ ಆರೋಗ್ಯ ಸೇವಾ ಅಧಿಕಾರಿ ಅನಿಸ್ಕರಿಯಾ ಅವರು ಮಹಿಳೆಯರಿಗೆ ಅಗತ್ಯವಾದ ಆರೋಗ್ಯ ಮಾಹಿತಿಗಳು ಹಾಗೂ ಆರೋಗ್ಯ ಕಾಳಜಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ತಿಳಿಸಿದರು.
ಸಂಪ್ರದಾಯದ ಸಂಕೇತವಾದ ಅರಿಶಿನ-ಕುಂಕುಮ ಕಾರ್ಯಕ್ರಮದೊಂದಿಗೆ ಆರೋಗ್ಯ ಜಾಗೃತಿಯನ್ನೂ ಸಂಯೋಜಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಮಹಿಳೆಯರ ಆರೋಗ್ಯ, ಕುಟುಂಬದ ಕ್ಷೇಮ ಹಾಗೂ ಸಾಮಾಜಿಕ ಒಗ್ಗಟ್ಟಿಗೆ ಒತ್ತು ನೀಡುವ ಮೂಲಕ ಆಯೋಜಕರು ಸಮಾಜಮುಖಿ ಚಿಂತನೆಯನ್ನು ಮೆರೆದರು.
ರಾದಾ ದೇವಾಡಿಗ ಅವರ ಸ್ವಾಗತ ನುಡಿಗಳೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ನರಸಿಂಹ ದೇವಾಡಿಗ, ಕೆ.ಆರ್.ಸಿ.ಎಲ್. ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಜೊತೆ ಕಾರ್ಯದರ್ಶಿ ರೇವತಿ ದೇವಾಡಿಗ ಅವರು ಧನ್ಯವಾದ ಸಮರ್ಪಿಸಿದರು.
ಉಪ್ಪುಂದ, ಬಿಜೂರು ಹಾಗೂ ಕೆರ್ಗಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಒಳಗೊಂಡಿರುವ ಉಪ್ಪುಂದ ದೇವಾಡಿಗರ ಸಂಘವು ಮಹಿಳಾ ಘಟಕದ ಮೂಲಕ ಆಯೋಜಿಸಿದ ಈ ಕಾರ್ಯಕ್ರಮವು ಸಂಘಟನಾ ಶಕ್ತಿಗೆ ಉತ್ತಮ ಉದಾಹರಣೆಯಾಯಿತು. ಸಮಾಜದ ಬಾಂಧವರು ತನು-ಮನ-ಧನಗಳಿಂದ ನೀಡಿದ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಯಿತು.
ಸಂಪ್ರದಾಯ, ಆರೋಗ್ಯ ಜಾಗೃತಿ ಹಾಗೂ ಸಾಮಾಜಿಕ ಒಗ್ಗಟ್ಟನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಇಂತಹ ರಚನಾತ್ಮಕ ಹಾಗೂ ಜನಪರ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ನಡೆಯಲಿ ಎಂಬುದು ಆಶಯ.
















