ಕುಂದಾಪುರ: ಸಮುದಾಯ ಸಾಂಸ್ಕೃತಿಕ ಸಂಘಟನೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನ ಬಕುಳ ಸಾಹಿತ್ಯ ವೇದಿಕೆಗಳ ಆಶ್ರಯದಲ್ಲಿ ಸಮುದಾಯ ರೆಪರ್ಟರಿಯ ‘ಕಾವ್ಯರಂಗ’ ಪ್ರಯೋಗ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಲಾಯಿತು. ಶಾಸನ ಪದ್ಯಗಳಿಂದ ಹಿಡಿದು ಇತ್ತೀಚಿನವರೆಗಿನ ಕನ್ನಡದ ಕಾವ್ಯವನ್ನು ರಂಗದಲ್ಲಿ ಅಭಿವ್ಯಕ್ತಿಗೊಳಿಸುವ ಈ ರಂಗಪ್ರಯೋಗದಲ್ಲಿ ಕಪ್ಪೆ ಆರಭಟ್ಟನ ಶಾಸನ, ಕವಿರಾಜಮಾರ್ಗ, ಪಂಪನಿಂದ ಮುಂದುವರಿದು ವೈದೇಹಿ, ಪ್ರತಿಭಾ ನಂದಕುಮಾರರವರೆಗಿನ ಮೂವತ್ತೊಂದು ಕಾವ್ಯದ ಹೊಳುಹುಗಳು ಮತ್ತು ಕಥನಗಳು ಈ ಪ್ರಯೋಗದಲ್ಲಿ ವಿದ್ಯಾರ್ಥಿಗಳ ಎದುರಾದವು. ಇವುಗಳಲ್ಲಿ ಕೆಲವನ್ನು ಕಲಾವಿದರು ಹಾಡಿದರು, ಕೆಲವನ್ನು ಅಭಿನಯಿಸಿದರು, ಇನ್ನು ಕೆಲವನ್ನು ವಾಚಿಸಿದರು. ಯಕ್ಷಗಾನದ ಮುಖವಾಡಗಳು ಮತ್ತು ಚೆಂಡೆ ಮದ್ದಲೆಗಳ ಹಿನ್ನೆಲೆಯಲ್ಲಿ ಬರುವ ಕುವೆಂಪುರವರ ರಾಮಾಯಣ ದರ್ಶನಂ ರಂಗಕ್ಕೆ ಅನನ್ಯವಾದ ಗತ್ತನ್ನು ಒದಗಿಸಿದರೆ, ದುಡಿಯ ಸದ್ದಿನೊಂದಿಗೆ ಎದುರಾಗುವ ಕಾರಂತರ ಚೋಮ ವಿದ್ಯಾರ್ಥಿಗಳ ಕಣ್ಣಾಲಿಗಳನ್ನು ತೇವಗೊಳಿಸಿದ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮುಂದೆ ಪ್ರದರ್ಶಿತವಾದ ಈ ರಂಗಪ್ರಯೋಗ ಕಾವ್ಯದ ಅಂತಃಸತ್ವಕ್ಕೆ ಧಕ್ಕೆಯಾಗದ ಹಾಗೆ ಸಮೃದ್ಧ ಓದಿನ ಅನುಭವವನ್ನು ರಂಗದ ಮೂಲಕ ಒದಗಿಸಿತು.
ಕಾವ್ಯರಂಗ ಪ್ರದರ್ಶನವನ್ನು ಕುಂದಾಪುರದ ಸ.ಪ.ಪೂ ಕಾಲೇಜಿನ ಹಿರಿಯ ಉಪನ್ಯಾಸಕ ರವೀಂದ್ರ ಉಪಾದ್ಯ ಮೂಲಕ ಉದ್ಘಾಟಿಸಿದರು. ವೇದಿಕೆಯ ಮೇಲೆ ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವಕಾರ, ರೆಪರ್ಟರಿಯ ಸಂಚಾಲಕರಾದ ದೇವೇಂದ್ರ ಗೌಡ, ಸಿಂಧನೂರು ಸಮುದಾಯದ ಪುರುಷೋತ್ತಮ, ಬಕುಳ ಸಾಹಿತ್ಯ ವೇದಿಕೆಯ ವಿಶ್ವನಾಥ ಕರಬ ಉಪಸ್ಥಿತರಿದ್ದರು. ಕುಂದಾಪುರ ಸಮುದಾಯದ ಕೋಶಾಧಿಕಾರಿ ಬಾಲಕೃಷ್ಣ ಎಮ್ ಸ್ವಾಗತಿಸಿದರು, ಕಾರ್ಯದರ್ಶಿ ಸದಾನಂದ ಬೈಂದೂರು ಕಾರ್ಯಕ್ರಮ ನಿರೂಪಿಸಿದರು.











