ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು – ಮಡಗಾಂವ್ ತನಕ ಇದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿಗೆ ವಿಸ್ತರಣೆಯಾಗಿದ್ದು, ಅಧಿಕೃತ ಘೋಷಣೆಯಾಗಿದೆ. ಜೊತೆಗೆ ಕುಂದಾಪುರ ಬೈಂದೂರು ನಿಲ್ದಾಣಗಳಲ್ಲಿಯೂ ನಿಲುಗಡೆಯಾಗಲಿದೆ.
ವಂದೇ ಭಾರತ್ ರೈಲು ಬೆಂಗಳೂರಿಗೆ ವಿಸ್ತರಣೆ ಹಾಗೂ ಕುಂದಾಪುರದಲ್ಲಿ ನಿಲುಗಡೆ ಯಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಂಸದ ಕೋಟ ಶೀನಿವಾಸ ಪೂಜಾರಿ ಅವರು ಗೌರವಾನ್ವಿತ ಕೇಂದ್ರ ರೈಲು ಸಚಿವರಾದ ಅಶ್ವಿನಿ ವೈಷ್ಣವ್ ರವರು ರೈಲು ವಿಸ್ತರಣೆ ಆದೇಶದ ಬಗ್ಗೆ ಘೋಷಿಸಿದ್ದಾರೆ. ಬೆಂಗಳೂರು-ಮಂಗಳೂರು-ಉಡುಪಿ-ಕಾರವಾರ-ಮಡಗಾಂವ್ ವಂದೇ ಭಾರತ್ ರೈಲು ಯೋಜನೆಗೆ ಸಂಬಂಧಿಸಿದಂತೆ ತಿಂಗಳಿಗೊಮ್ಮೆ ಮಾನ್ಯ ಸಚಿವರುಗಳಲ್ಲಿ ಪತ್ರ ಹಾಗೂ ಭೇಟಿಯ ಮೂಲಕ ಬೇಡಿಕೆ ಸಲ್ಲಿಸುತ್ತಲೇ ಬರುತ್ತಿದೆ. ಅಂತಿಮವಾಗಿ ನಮ್ಮ ಪ್ರಯತ್ನಕ್ಕೆ ಫಲ ದೊರೆತಿದೆ. ವಂದೇ ಮಾತರಂ ಸಂಪೂರ್ಣ ರಾಷ್ಟ್ರಗೀತೆಗೆ ಬೆಂಬಲಿಸಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗುತ್ತಿರುವ ಇದೇ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಒದಗಿ ಬಂದಿದ್ದು ಭಾರತ ಮಾತೆಯ ಕೃಪೆಯೇ ಸರಿ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಈ ಮಹತ್ತರ ರೈಲು ಯೋಜನೆ ನಮಗೆ ಸಿಗುವಲ್ಲಿ ನೆರವಾದ ಗೌರವಾನ್ವಿತ ಕೇಂದ್ರ ರೈಲು ಸಚಿವರುಗಳಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಹಾಗೂ ಕಾಲಕಾಲಕ್ಕೆ ನನಗೆ ಸೂಕ್ತ ಸಲಹೆ ನೀಡುತ್ತಿದ್ದ ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಶೀಘ್ರದಲ್ಲೇ ಕಡಲ ತಡಿಯಲ್ಲಿ ಈ ವಂದೇ ಭಾರತ್ ರೈಲು ಪ್ರಯಾಣ ಬೆಳೆಸಲಿದೆ. ನಿಮ್ಮಂತೆ ನನಗೂ ಕುತೂಹಲ, ಉತ್ಸಾಹ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.











