ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಮೆಟಾ ಭಾರತದಲ್ಲಿ ನಿರ್ಬಂಧಿಸಿದೆ.
ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಭಾರತದಲ್ಲಿ ತೆರೆಯಲು ಸಾಧ್ಯವಾಗುತ್ತಿಲ್ಲ. ಪ್ರವೇಶವನ್ನು ಸ್ಥಳೀಯ ಕಾನೂನಿನ ಕಾರಣಕ್ಕೆ ನಿರ್ಬಂಧಿಸಲಾಗಿದೆ ಎಂದು ಇನ್‌ಸ್ಟಾಗ್ರಾಂ ಸಂದೇಶ ತಿಳಿಸಿದೆ. ವಿಷಯವನ್ನು ಪರಿಶೀಲಿಸಿದ ಬಳಿಕ ಮತ್ತು ಕಾನೂನು ಹಾಗೂ ಮಾನವ ಹಕ್ಕುಗಳ ಹಕ್ಕುಗಳ ಅಂಶಗಳನ್ನು ಪರಿಗಣಿಸಿ ನಿರ್ಬಂಧ ವಿಧಿಸಲಾಗಿದೆ ಎಂದು ಅದು ಹೇಳಿದೆ. ಇನ್‌ಸ್ಟಾಗ್ರಾಂ ಖಾತೆಯ ನಿರ್ಬಂಧ ವಿಚಾರವನ್ನು ಸತೀಶ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕಾರ್ಟೂನ್‌ಗೆ ಹೆದರುವ ಸರಕಾರ ಇದುವರೆಗೆ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮತ್ತೊಬ್ಬ ಕಾರ್ಟೂನಿಸ್ಟ್ ಮಂಜುಲ್ ಅವರ ಚುನಾವಣಾ ಆಯೋಗಕ್ಕೆ ಸಂಬಂಧಿ ಸಿದ ವ್ಯಂಗ್ಯಚಿತ್ರಕ್ಕೂ ಭಾರತದಲ್ಲಿ ಇನ್ ಸ್ಟಾಗ್ರಾಂ ಪ್ರವೇಶ ನಿರ್ಬಂಧಿಸಿದೆ. ಭಾರತ ಸರಕಾರ ಅಥವಾ ಕಾನೂನು ಜಾರಿ ಸಂಸ್ಥೆಗಳಿಂದ ಬಂದ ಸೂಚನೆಯ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಜುಲ್ ತಿಳಿಸಿದ್ದಾರೆ.
ತಮ್ಮ ಕೆಲವು ಪೋಸ್ಟ್‌ಗಳನ್ನು ತೆಗೆದುಹಾಕುವ ಮೊದಲು ಮೆಟಾದಿಂದ ಯಾವುದೇ ಸೂಚನೆ ಬಂದಿರಲಿಲ್ಲ. ಬಳಿಕ ಭಾರತದಲ್ಲಿ ತಮ್ಮ ಪ್ರೊಫೈಲ್ ಲಭ್ಯವಿಲ್ಲ ಎಂಬ ಅಧಿಸೂಚನೆ ಬಂದಿತ್ತು. ಮೆಟಾ ಕೈಗೊಂಡ ಕ್ರಮವನ್ನು ಪ್ರಶ್ನಿಸಲು ತಾವು ಪ್ರಯತ್ನಿಸುತ್ತಿದ್ದರೂ ಇನ್ಸ್ಟಾಗ್ರಾಂನ ಸಹಾಯ ಕೇಂದ್ರ ಸಂಪರ್ಕಿಸಲು ಸಾಧ್ಯವಾಗಿಲ್ಲ. ಎಲ್ಲವೂ ಈಗ ಎಐ ನಿಯಂತ್ರಣಲ್ಲಿದೆ. ಹೀಗಾಗಿ ಅಲ್ಲಿ ಯಾವುದೇ ಪರಿಹಾರ ಪಡೆಯುವುದು ಕಷ್ಟ. ನ್ಯಾಯಾಲಯದ ಮೊರೆ ಹೋಗುವುದೊಂದೇ ಪರಿಹಾರ ಎಂದು ಕೇಳಿದ್ದೇನೆ. ಯಾವುದೇ ಸಂಘಟನೆಗೆ ಕಾನೂನು ಮಾರ್ಗ ಅನುಸರಿಸುವುದು ಸುಲಭವಾಗಬಹುದು. ಆದರೆ ನನ್ನಂತಹ ಸ್ವತಂತ್ರ ವ್ಯಂಗ್ಯಚಿತ್ರಕಾರನಿಗೆ ಅದು ಆರ್ಥಿಕವಾಗಿ ಕೈಗೆಟುಕುವುದಿಲ್ಲ -ಸತೀಶ್ ಆಚಾರ್ಯ, ಕಾರ್ಟೂನಿಸ್ಟ್ ಕುಂದಾಪುರ.
















