ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಇಲ್ಲಿನ ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು ವತಿಯಿಂದ ‘Wednesday Learning Series’ ಅಂಗವಾಗಿ ‘ವಾಕ್ – ಸ್ಟೆಪ್ ಬೈ ಸ್ಟೆಪ್ ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮವು ಬುಧವಾರ ಕಾಲೇಜಿನ ಟಿ. ಮೋಹಂದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್‌ನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿ, ಜೀವನದಲ್ಲಿ ಗುರಿ ಸಾಧಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಮುನ್ನಡೆಯುವಿಕೆ, ನಿರಂತರ ಪ್ರಯತ್ನ ಹಾಗೂ ಸಕಾರಾತ್ಮಕ ಮನೋಭಾವದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಸ್ತುಗಳು ಮತ್ತು ಸನ್ನಿವೇಶಗಳನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಪ್ರತಿಯೊಂದು ಸಂದರ್ಭದಲ್ಲಿಯೂ ಒಳ್ಳೆಯದನ್ನು ಕಂಡುಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರತಿಯೊಂದು ಹೆಜ್ಜೆಯೂ ವ್ಯಕ್ತಿಯ ಬೆಳವಣಿಗೆ ಹಾಗೂ ಯಶಸ್ಸಿನತ್ತ ಕೊಂಡೊಯ್ಯುವ ರೀತಿಯನ್ನು ವಿವರಿಸಿದ ಅವರು, ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸ್ಪಷ್ಟವಾಗಿ ಹೊಂದಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ಉಪಸ್ಥಿತರಿದ್ದರು. ಪ್ರಥಮ ಬಿಸಿಎ ‘ಬಿ ವಿಭಾಗದ ವಿದ್ಯಾರ್ಥಿ ಪ್ರಧ್ಯಾನ್ ಸ್ವಾಗತಿಸಿದರು. ಪ್ರಥಮ ಬಿಸಿಎ ‘ಬಿ’ವಿಭಾಗದ ವಿದ್ಯಾರ್ಥಿ ಪ್ರಣವ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಪ್ರಥಮ ಬಿ.ಕಾಂ ವಿದ್ಯಾರ್ಥಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.
















