ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜನಪದರು ತಮ್ಮ ನಿತ್ಯದ ಅನುಭವ, ಸನ್ನಿವೇಶಕ್ಕೆ ತಕ್ಕಂತೆ ಗಾದೆಗಳನ್ನು ರಚಿಸಿದರು. ಜೀವನದ ದರ್ಶನಗಳಾದ ಗಾದೆಗಳಲ್ಲಿ ಬದುಕಿನ ಮರ್ಮ ಇದೆ. ಅವುಗಳನ್ನು ಅರಿತು ಬಾಳುವ ಮೂಲಕ ಕಲಿತ ವಿದ್ಯೆ ಅಂಕಕಷ್ಟೇ ಸೀಮಿತವಾಗದೆ, ಸಂಸ್ಕಾರದ ಬದುಕಿಗಾಗಬೇಕು ಎಂದು ನೇತಾಜಿ ಹಿರಿಯ ಪ್ರಾಥಮಿಕ ಶಾಲೆ, ಕಂಡ್ಲೂರಿನ ನಿವೃತ್ತ ಮುಖ್ಯ ಶಿಕ್ಷಕ ಎ. ಜಯಕರ್ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ಕುಂದಗನ್ನಡ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕುಂದಕನ್ನಡ ಗಾದೆಗಳ ಬಗೆಗಿನ ಸಂವಾದ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಕುಂದಗನ್ನಡ ಸಂಘದ ಸಂಯೋಜಕಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು. ಕುಂದಗನ್ನಡ ಸಂಘದ ಸಂಯೋಜಕಿ ರಶ್ಮಿತಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.











