ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವಕರ್ಮ ಸಮಾಜದ ಕೆಲವರು, ತಮ್ಮ ಸಮುದಾಯಕ್ಕೆ ನಿಂದನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಡೆಸಿದ ಸಭೆಯಲ್ಲಿಯೂ ನನ್ನ ಮಾತನ್ನು ತಿರುಚಿ ತಪ್ಪು ಸಂದೇಶ ಹರಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ, ನಾನು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ವಿಷಾದವೂ ಇಲ್ಲ, ಕ್ಷಮೆಯೂ ಇಲ್ಲ. ನನ್ನಿಂದ ಕ್ಷಮೆಯಾಚನೆ ಮಾಡಲಾಗಿದೆ ಎಂಬ ಮಾಹಿತಿ ಸಂಪೂರ್ಣವಾಗಿ ತಪ್ಪಾಗಿದೆ ಎಂದು ಹಿರಿಯ ಸಾಹಿತಿ, ವಕೀಲ ಎ.ಎಸ್.ಎನ್. ಹೆಬ್ಬಾರ್ ಸ್ಪಷ್ಟೀಕರಣ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಸಾಸ್ತಾನದಲ್ಲಿ ಜರುಗಿದ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ನನ್ನ ಭಾಷಣದಲ್ಲಿ ಹಳೆಯ ಹಾಸ್ಯದ ತುಣುಕೊಂದನ್ನು ತಪ್ಪಾಗಿ ಗ್ರಹಿಸಿಕೊಂಡು ತಮ್ಮ ಸಮುದಾಯಕ್ಕೆ ಅನ್ವಯಿಸಿಕೊಂಡ ವಿಶ್ವಕರ್ಮ ಸಮಾಜದ ಕೆಲವರು, ತಮ್ಮ ಸಮುದಾಯಕ್ಕೆ ನಿಂದನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ, ಸಂಘಟನೆಯ ಅಧ್ಯಕ್ಷರು ಹಾಗೂ ನನ್ನ ಪರಿಚಿತರಾದ ಸುಬ್ರಾಯ ಆಚಾರ್ ಅವರು ನನಗೆ ದೂರವಾಣಿ ಕರೆ ಮಾಡಿ, “ನೀವು ಒಂದು ಗಳಿಗೆ ಸಭೆಗೆ ಬಂದು, ನಮ್ಮ ಸಮುದಾಯದ ಕುರಿತು ನೀವು ಏನೂ ಹೇಳಿಲ್ಲ ಎಂದು ಸಮಾಧಾನದ ಮಾತು ಹೇಳಿದರೆ ಎಲ್ಲವೂ ಮುಕ್ತಾಯವಾಗುತ್ತದೆ” ಎಂದು ವಿನಂತಿಸಿದರು.
ನಾನು ಮರುದಿನ ತಾ.05ರಂದು ಬೆಳಿಗ್ಗೆ ಪತ್ನಿಯೊಂದಿಗೆ ಕಾಸರಗೋಡಿಗೆ ತೆರಳಬೇಕಾಗಿರುವುದರಿಂದ ಬರಲು ಅನಾನುಕೂಲವಿದೆ ಎಂದು ತಿಳಿಸಿದೆ. ಆದರೆ, “ಬರೇ ಎರಡು ನಿಮಿಷ ಮಾತ್ರ. ಬೇರೆ ಯಾರೂ ಮಾತನಾಡುವುದಿಲ್ಲ. ನೀವು ಎರಡು ನಿಮಿಷ ಮಾತನಾಡಿ ಮುಂದೆ ಸಾಗಬಹುದು” ಎಂದು ಅವರು ಒತ್ತಾಯಿಸಿದ ಕಾರಣ, ತಾ.06ರಂದು ಬೆಳಿಗ್ಗೆ ಕಾರಿನಲ್ಲಿ ಅವರ ಕಾರ್ಯಕ್ರಮಕ್ಕೆ ತೆರಳಿದ್ದೆ. ಆ ಸಂದರ್ಭದಲ್ಲಿ ಹಿತಚಿಂತಕರೊಬ್ಬರು ದೂರವಾಣಿ ಮಾಡಿ, ಪೊಲೀಸ್ ರಕ್ಷಣೆ ಇಲ್ಲದೆ ಅಲ್ಲಿಗೆ ಬರಬೇಡಿ ಎಂದು ಎಚ್ಚರಿಸಿದರು. ಆದರೆ, “ಅದೆಲ್ಲ ಬೇಡ. ಬರೇ ಎರಡು ನಿಮಿಷ ಸಮಾಧಾನ ಮಾಡುವುದಷ್ಟೇ. ಅಧ್ಯಕ್ಷ ಸುಬ್ರಾಯ ಆಚಾರ್ ಅವರು ಭರವಸೆ ನೀಡಿದ್ದಾರೆ” ಎಂದು ಹೇಳಿ ಅಲ್ಲಿಗೆ ತೆರಳಿದ್ದೆ.
ಸಾಲಿಗ್ರಾಮದಲ್ಲಿರುವ ಅವರ ಕಟ್ಟಡದ ಎದುರು ಕಾರು ನಿಲ್ಲಿಸಿ, ಪತ್ನಿಗೆ ಕಾರಿನಲ್ಲೇ ಇರುವಂತೆ ತಿಳಿಸಿ, “ಎರಡು ನಿಮಿಷದಲ್ಲಿ ಬರುತ್ತೇನೆ” ಎಂದು ಹೇಳಿ ಒಳಗೆ ತೆರಳಿದೆ. ನನ್ನನ್ನು ಬರಮಾಡಿಕೊಂಡ ಅಧ್ಯಕ್ಷರು ಕೂಡ “ಎರಡು ನಿಮಿಷ ಸರ್, ಕೂಡಲೇ ನೀವು ಹೋಗಬಹುದು. ಇನ್ಯಾವುದೇ ಕಾರ್ಯಕ್ರಮ ಇರುವುದಿಲ್ಲ” ಎಂದು ಪುನರುಚ್ಚರಿಸಿದರು. ಬಳಿಕ ನನ್ನನ್ನು ವೇದಿಕೆಗೆ ಕರೆದೊಯ್ದು ತಮ್ಮ ಪಕ್ಕದಲ್ಲಿ ಕುಳ್ಳಿರಿಸಿದರು.
ಆ ನಂತರ ಅಲ್ಲಿ ನಡೆದದ್ದು ಮಾತ್ರ ಸಂಪೂರ್ಣವಾಗಿ ಬೇರೆಯಾಗಿತ್ತು. ಒಬ್ಬರ ನಂತರ ಒಬ್ಬರು ಮಾತನಾಡುತ್ತಾ ನನ್ನ ವಿರುದ್ಧ ತೀವ್ರವಾಗಿ ನಿಂದಿಸಿದರು. ಅಧ್ಯಕ್ಷರ ಬಳಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೂ ಅವರು ಮೌನವಾಗಿ ಕುಳಿತಿದ್ದರು. ವೇದಿಕೆಯ ಹಿಂಭಾಗದಲ್ಲಿ ನನ್ನ ಕ್ಷಮೆಯಾಚನೆಯನ್ನು ಸೂಚಿಸುವ ಬ್ಯಾನರ್ ಕೂಡ ಅಳವಡಿಸಲಾಗಿತ್ತು. ಅದಕ್ಕೂ ನಾನು ಆಕ್ಷೇಪಿಸಿದರೂ ಸುಬ್ರಾಯ ಆಚಾರ್ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆಗ ಇದು ಪೂರ್ವನಿಯೋಜಿತವಾದ ಷಡ್ಯಂತ್ರವಿರಬಹುದೆಂಬ ಅನುಮಾನ ನನಗೆ ಮೂಡಿತು.
ಅಂತಿಮವಾಗಿ ನನ್ನನ್ನು ಮಾತನಾಡಲು ಕರೆದರು. ನಾನು ಮಾತನಾಡಲು ಎದ್ದು ನಿಂತ ತಕ್ಷಣ “ಧಿಕ್ಕಾರ, ಧಿಕ್ಕಾರ” ಎಂಬ ಘೋಷಣೆಗಳು ಮೊಳಗಿದವು. “ನಿಮ್ಮ ಜಯಕಾರಕ್ಕೆ ಧನ್ಯವಾದಗಳು” ಎಂದು ಹೇಳಿ ಮಾತು ಆರಂಭಿಸಿ, “ನಿಮ್ಮ ಸಮಾಜದ ಬಗ್ಗೆ ಗೌರವ ಹೊಂದಿರುವ ನಾನು, ಈ ವಯಸ್ಸಿನಲ್ಲಿ ನಿಮ್ಮ ಸಮುದಾಯವನ್ನು ನಿಂದಿಸುವ ಅಥವಾ ಅವಮಾನಿಸುವ ಕೆಲಸ ಮಾಡುತ್ತೇನೆಯೇ? ನಿಮ್ಮ ಸಮುದಾಯದ ಬಗ್ಗೆ ನಾನು ಏನೂ ಹೇಳಿಲ್ಲ” ಎಂದು ಹೇಳುತ್ತಿರುವಾಗಲೇ, ಕೆಂಪಂಗಿ ಧರಿಸಿದ್ದ ವ್ಯಕ್ತಿಯೊಬ್ಬರು ಎದ್ದು, “ನಿಮ್ಮ ಭಾಷಣ ಬೇಡ, ಈ ಕೂಡಲೇ ಕ್ಷಮೆ ಕೇಳಿ” ಎಂದು ಜೋರಾಗಿ ಕೂಗಾಡಿದರು. ಅದಕ್ಕೆ ಚಪ್ಪಾಳೆಯೂ ಕೇಳಿಬಂತು.
ವಾತಾವರಣ ಮತ್ತಷ್ಟು ಬಿಸಿಯಾಗುತ್ತಿರುವುದನ್ನು ಕಂಡು, ನನಗೆ ದೂರವಾಣಿ ಮೂಲಕ ಎಚ್ಚರಿಕೆ ನೀಡಿದ್ದ ಹಿತಚಿಂತಕರ ಮಾತು ನೆನಪಾಯಿತು. ನನ್ನ ಮೇಲೆ ಹಲ್ಲೆ ನಡೆಯುವ ಸಾಧ್ಯತೆಯಿದೆ ಎಂಬ ಆತಂಕವೂ ಉಂಟಾಯಿತು. ವೇದಿಕೆಯ ಮೇಲಿದ್ದವರ ಹಾಗೂ ಕೆಳಗಿದ್ದವರ ಒತ್ತಡದ ನಡುವೆ, ಯಾವುದೇ ಅಪಾಯವಾಗದಂತೆ ಅಲ್ಲಿಂದ ಜೀವಸಹಿತ ಹೊರಬರಲು ವಿಷಾದ ವ್ಯಕ್ತಪಡಿಸಿ ತಕ್ಷಣ ನಿರ್ಗಮಿಸುವುದೊಂದೇ ಮಾರ್ಗ ಎಂದು ನಾನು ಗ್ರಹಿಸಿದೆ. ಹೀಗಾಗಿ ವಿಷಾದ ವ್ಯಕ್ತಪಡಿಸಿ ಅಲ್ಲಿಂದ ಹೊರಟೆ.
ಆಗ ನನ್ನನ್ನು ಕಳುಹಿಸಲು ಬಂದಿದ್ದ ಪೊಲೀಸ್ ಅಧಿಕಾರಿಯೂ, “ನೀವು ಇಲ್ಲಿಗೆ ಒಬ್ಬರೇ ಬರಬಾರದಿತ್ತು” ಎಂದು ಹೇಳಿದರು. ನಾನು ಕಾರಿನಲ್ಲಿ ಕುಳಿತು ನೇರವಾಗಿ ಕಾಸರಗೋಡಿಗೆ ತೆರಳಿದೆ.
ಇಂದು ಪ್ರಕಟವಾದ ಪತ್ರಿಕೆಯಲ್ಲಿ ನಾನು ಕ್ಷಮೆಯಾಚಿಸಿದ್ದೇನೆ ಎಂದು ಸಂಘಟನೆಯವರು ಮಾಹಿತಿ ನೀಡಿ ಸುದ್ದಿ ಪ್ರಕಟಿಸಿರುವುದು ಕಾಸರಗೋಡಿನಲ್ಲಿ ತಡವಾಗಿ ನನಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ಸತ್ಯಸಂಗತಿಯನ್ನು ಸಾರ್ವಜನಿಕರಿಗೆ ತಿಳಿಸುವುದು ಅಗತ್ಯವೆಂದು ಭಾವಿಸಿ ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ.
ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ, ನಾನು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ವಿಷಾದವೂ ಇಲ್ಲ, ಕ್ಷಮೆಯೂ ಇಲ್ಲ. ನನ್ನಿಂದ ಕ್ಷಮೆಯಾಚನೆ ಮಾಡಲಾಗಿದೆ ಎಂಬ ಮಾಹಿತಿ ಸಂಪೂರ್ಣವಾಗಿ ತಪ್ಪಾಗಿದೆ ಎಂದು ಎ.ಎಸ್.ಎನ್ ಹೆಬ್ಬಾರ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.
















