ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಹೊಸಾಡು ಗ್ರಾಮದ ಕೆರೆಯಲ್ಲಿ ಮುಳುಗಿ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಮೃತಪಟ್ಟ ಘಟನೆ ನಡೆದಿದೆ.
ಮೃತ ಬಾಲಕಿಯರನ್ನು ಮುಳ್ಳಿಕಟ್ಟೆ ಹೆದ್ದಾರಿ ಪಕ್ಕದ ಜೋಪಡಿಯಲ್ಲಿ ವಾಸವಾಗಿದ್ದ, ಮೂಲತಃ ಹಾವೇರಿ ಜಿಲ್ಲೆಯವರಾದ ವೈಶಾಲಿ ಮತ್ತು ಸುನಿತಾ ಎಂದು ಗುರುತಿಸಲಾಗಿದೆ. ಇಬ್ಬರೂ ಸಮೀಪದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದರು ಎಂದು ತಿಳಿದುಬಂದಿದೆ.
ಬಟ್ಟೆ ಒಗೆಯಲು ಹಾಗೂ ಸ್ನಾನ ಮಾಡಲು ಕೆರೆಗೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿಯರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದು, ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ, ಕುಂದಾಪುರ ಅಗ್ನಿಶಾಮಕ ದಳ, ದಿನೇಶ್ ಖಾರ್ವಿ ನೇತೃತ್ವದ ತಂಡ ಹಾಗೂ ಟೀಮ್ ಎಚ್ಐ ತುರ್ತು ಸ್ಪಂದನಾ ತಂಡದ ಸದಸ್ಯರು ಕಾರ್ಯಾಚರಣೆಗೆ ಕೈಜೋಡಿಸಿದರು.
ಘಟನಾ ಸ್ಥಳಕ್ಕೆ ಆಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ತಂಡಗಳು ತಲುಪಲು ಸಾಕಷ್ಟು ಹರಸಾಹಸ ಪಡಬೇಕಾಯಿತು. ಬಳಿಕ ದಿನೇಶ್ ಖಾರ್ವಿ ಅವರ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕಿಯರ ಮೃತದೇಹಗಳನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ.

















