ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಜ್ರ ಮಹೋತ್ಸವ ಅಂಗವಾಗಿ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸಹಯೋಗದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಸಮಗ್ರ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಕ್ಷಗಾನ ಸ್ಪರ್ಧೆಯ ವೈಯುಕ್ತಿಕ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.
ಪುರುಷ ವೇಷ – ಪ್ರಥಮ ಅನಂತಕೃಷ್ಣ ನಾವಡ – ತೃತೀಯ ಬಿ ಕಾಂ, ಸ್ತ್ರೀವೇಷ – ಅಶ್ವಿನಿ ಐತಾಳ್- ತೃತೀಯ ಬಿ ಎಸ್ಸಿ , ಹಾಸ್ಯ- ತನ್ಮಯ್- ದ್ವಿತೀಯ ಬಿ ಎಸ್ಸಿ ಬಹುಮಾನ ವಿಜೇತರಾಗಿದ್ದಾರೆ. ಕಾಲೇಜಿನ ತೃತೀಯ ಬಿ.ಎಸ್.ಸಿ ವಿದ್ಯಾರ್ಥಿ ಸಾತ್ಯಕಿ, ತೃತೀಯ ಬಿ.ಕಾಮ್ ನ ವಿದ್ಯಾರ್ಥಿಗಳಾದ ಅನೂಪ್ ಉರಾಳ ಮತ್ತು ವಿದಾತ ಉಡುಪ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ.
ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಮತ್ತು ಲಲಿತಾ ಕಲಾ ಸಂಘದ ಸಂಯೋಜಕ ಶಶಾಂಕ್ ಪಟೇಲ್,ಕೆಳಮನೆ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು “ಕೃಷ್ಣಾರ್ಜುನ ಕಾಳಗ” ಎಂಬ ಪ್ರಸಂಗವನ್ನು ಪ್ರದರ್ಶನ ನೀಡಿದ್ದರು. ಯಕ್ಷಗಾನ ಸ್ಪರ್ಧೆಯ ಹಿಮ್ಮೇಳದಲ್ಲಿ – ಪ್ರಸಾದ್ ಮೊಗೆಬೆಟ್ಟು, ರಾಘವೇಂದ್ರ ಹೆಗಡೆ,ಯಲ್ಲಾಪುರ ಮತ್ತು ಶಿವಾನಂದ ಕೋಟ ಸಹಕರಿಸಿದ್ದರು. ವಿದ್ಯಾರ್ಥಿಗಳಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ,ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















