ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಗಂಗೊಳ್ಳಿ ಪೊಲೀಸ್ ಠಾಣೆಯು ಇಡೀ ರಾಜ್ಯದಲ್ಲಿ 7ನೇ ಅತ್ಯುತ್ತಮ ಠಾಣೆಯಾಗಿ ಹೊರಹೊಮ್ಮಿರುವ ಬಗ್ಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಅವರು ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗೌರವನ್ನು ಸಮರ್ಪಿಸಿದರು.

ಬಳಿಕ ಮಾತನಾಡಿದ ಶಾಸಕರು ಕಳೆದ 10 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯದ 10 ಠಾಣೆಗಳ ಪೈಕಿ ಬೈಂದೂರು ವಿಧಾನಸಭಾ ಕ್ಷೇತ್ರದ ಗಂಗೊಳ್ಳಿ ಪೊಲೀಸ್ ಠಾಣೆಯು ಅಪರಾಧಗಳ ಪತ್ತೆ ಹಚ್ಚುವಿಕೆ, ಸಾರ್ವಜನಿಕರೊಂದಿಗೆ ಸಂಪರ್ಕ, ಜನಸ್ನೇಹಿ ಪೊಲೀಸಿಂಗ್, ಮಾದಕ ದ್ರವ್ಯ ತಡೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಸಂಬಂಧ ಇಡೀ ರಾಜ್ಯದಲ್ಲಿಯೇ 7ನೇ ಸ್ಥಾನ ಪಡೆದಿರುವುದು ಸಂತೋಷದ ವಿಚಾರ.
ಈ ನಿಟ್ಟಿನಲ್ಲಿ ಈ ಸಾಧನೆಗಾಗಿ ದುಡಿದ ಈ ಹಿಂದಿನ ಠಾಣಾಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳು. ಗಂಗೊಳ್ಳಿ ಠಾಣೆಯ ಕಾರ್ಯ ವೈಖರಿಯು ಕ್ಷೇತ್ರದ ಹಾಗೂ ಜಿಲ್ಲೆಯ ಇತರ ಠಾಣೆಗಳಿಗೂ ಮಾದರಿಯಾಗಲಿ, ಎಂದು ಶಾಸಕರು ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು .
ಶಾಸಕರೊಂದಿಗೆ ಭಾರತೀಯ ಜನತಾ ಪಾರ್ಟಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಮಂಡಲ ಅಧ್ಯಕ್ಷರಾದ ಅನಿತ ಆರ್ ಕೆ., ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ ಪೂಜಾರಿ ವಸ್ರೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ತ್ರಾಸಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಿಥುನ್ ತ್ರಾಸಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ನಾವುಂದ ಹಾಗೂ ಜಯಂತ್ ಗಂಗೊಳ್ಳಿ ಎಸ್ಸಿ ಮೋರ್ಚದ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಮಂಕಿ ಹಾಗೂ ಸ್ಥಳೀಯ ಮುಖಂಡರಾದ ರವಿ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.

















