ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು,ಅ.28: ಇಲ್ಲಿನ ಪೀಣ್ಯದ ಎಚ್‌ಎಂಟಿ ಲೇಔಟ್‌ನಲ್ಲಿರುವ ‘ರಥನ್ ಬೇಕರಿ’ಯಲ್ಲಿ ಮಂಗಳವಾರ ರಾತ್ರಿ ಪುಡಿರೌಡಿಗಳು ದಾಂದಲೆ ನಡೆಸಿ, ಬೇಕರಿ ಸಿಬ್ಬಂದಿ ಹಾಗೂ ಮಹಿಳಾ ಮಾಲೀಕರ ಮೇಲೆ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.
ಬೇಕರಿಗೆ ತೆರಳಿದ ಮಹೇಶ್ ಹಾಗೂ ರಜತ್ ಎಂಬ ಪುಂಡರು, ಅಲ್ಲಿ ಟೀ ಮತ್ತು ಕಾಫಿ ಕುಡಿದಿದ್ದಾರೆ. ಬಳಿಕ ಬೇಕರಿ ಸಿಬ್ಬಂದಿ ಬಿಲ್ ಪಾವತಿಸುವಂತೆ ಕೇಳಿದಾಗ, ಒಮ್ಮೆಲೇ ಕೆರಳಿ ಅಸಭ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದಾರೆ. “ನಾನು ಜೈಲಿಗೆ ಹೋಗಿ ಬಂದವನು ಗೊತ್ತಾ? ದೊಡ್ಡ ರೌಡಿ ನಾನು, ನನ್ನ ಹತ್ತಿರವೇ ದುಡ್ಡು ಕೇಳ್ತಿಯಾ?” ಎಂದು ಅಹಂಕಾರದ ಮಾತುಗಳನ್ನಾಡುತ್ತಾ ಅಂಗಡಿಯಲ್ಲಿದ್ದವರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದಾರೆ. ಬೇಕರಿ ಆವರಣದಲ್ಲಿದ್ದ ಗಾಜಿನ ಬಾಟಲಿಗಳನ್ನು ಎತ್ತಿ ನೆಲಕ್ಕೆ ಅಪ್ಪಳಿಸಿ ಪುಡಿಪುಡಿ ಮಾಡಿ ಸೃಷ್ಟಿಸಿದ ಆತಂಕ ಸಣ್ಣದಾಗಿರಲಿಲ್ಲ. ಅಷ್ಟೇ ಅಲ್ಲದೆ, “ಇನ್ಮುಂದೆ ನಾನು ಮಾತ್ರವಲ್ಲ, ನಮ್ಮ ಹುಡುಗರು ಬಂದರೂ ಸರಿ, ಯಾರ ಹತ್ತಿರವೂ ದುಡ್ಡು ಕೇಳುವಂತಿಲ್ಲ! ಎಲ್ಲರಿಗೂ ಫ್ರೀಯಾಗಿ ಟೀ, ಕಾಫಿ ಕೊಡಬೇಕು” ಎಂದು ದಬ್ಬಾಳಿಕೆ ನಡೆಸಿದ್ದಾರೆ. ಈ ವೇಳೆ ಗಲಾಟೆ ತಡೆಯಲು ಬಂದ ಬೇಕರಿಯ ಮಹಿಳಾ ಮಾಲೀಕರಿಗೆ ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸಿ, “ನೀನೇನು ಸೀಮೆಗೇ ಇಲ್ಲದವಳಾ? ನಿನ್ನನ್ನು ಚುಚ್ಚಿ ಸಾಯಿಸಿಬಿಡ್ತೀನಿ, ನಿನ್ನ ಇಡೀ ಕುಟುಂಬವನ್ನೇ ಮುಗಿಸಿಹಾಕ್ತೀನಿ” ಎಂದು ಬಹಿರಂಗವಾಗಿ ಜೀವ ಬೆದರಿಕೆ ಒಡ್ಡಿದ್ದಾರೆ.
ರಾತ್ರಿ ವೇಳೆ ನಡೆದ ಈ ಗೂಂಡಾಗಿರಿಯಿಂದ ಬೇಕರಿ ಸಿಬ್ಬಂದಿ ಹಾಗೂ ಸ್ಥಳೀಯರು ತೀವ್ರ ಭೀತಿಗೊಳಗಾಗಿದ್ದಾರೆ. ಘಟನೆ ನಡೆದ ತಕ್ಷಣವೇ ಸಂತ್ರಸ್ತ ಮಹಿಳಾ ಮಾಲೀಕರು ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೀಣ್ಯ ಠಾಣೆಯ ಪೊಲೀಸರು, ಮಹಿಳೆಯ ಮೇಲೆ ದೌರ್ಜನ್ಯ, ಜೀವ ಬೆದರಿಕೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಎಸಗಿದ ಆರೋಪದಡಿ ಪುಂಡರಾದ ಮಹೇಶ್ ಮತ್ತು ರಜತ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಬೇಕರಿ ಮಾಲಿಕರು ಕುಂದಾಪುರ ಮೂಲದವರಾಗಿದ್ದು, ಹೆಚ್ಚುತ್ತಿರುವ ರೌಡಿಗಳ ಕಾಟದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇಂತಹ ರೌಡಿ ಪ್ರವೃತ್ತಿಯ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

















