ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯವಾದ ಮಹಿಳೆಯ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ವ್ಯಕ್ತಿಯೊಬ್ಬರಿಗೆ ಸುಳ್ಳು ಪ್ರಕರಣ ಹಾಗೂ ಆತ್ಮಹತ್ಯೆ ಬೆದರಿಕೆ ಹಾಕಿ, ಸುಮಾರು 42.97 ಲಕ್ಷ ಹಣ ವಸೂಲಿ ಮಾಡಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಮಹಿಳೆ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತಳನ್ನು ಬೈಂದೂರು ತಾಲೂಕಿನ ಮಯ್ಯಾಡಿ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಾಸವಾಗಿರುವ ನಾಗರತ್ನ ಹೆಚ್. (42) ಹಾಗೂ ಮೂಲತಃ ಕಾರ್ಕಳ ತಾಲೂಕಿನ ಮಿರ್ಯಾರು ನಿವಾಸಿಯಾಗಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ವಾಸವಾಗಿರುವ ಹೇಮಂತ್ (41) ಎಂದು ಗುರುತಿಸಲಾಗಿದೆ.
ಉಡುಪಿಯ ನಿರ್ಮಾಣ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಕೆಲಸ ಮಾಡುತ್ತಿರುವ ಪ್ರದೀಪ್ ಕೆ. ಎಂಬವರು ವಿವಾಹಕ್ಕಾಗಿ ವಧುವನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ, 2023ರ ಕೊನೆಯ ಭಾಗ ಅಥವಾ 2024ರ ಜನವರಿಯಲ್ಲಿ ಕನ್ನಡ ಜೋಡಿ ಮ್ಯಾಟ್ರಿಮೋನಿ ಆ್ಯಪ್ ಮೂಲಕ ನಾಗರತ್ನ ಹೆಚ್. ಎಂಬವರ ಪರಿಚಯವಾಗಿತ್ತು.
ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಎಸ್. ಕಡಂಬಿ ವಿದ್ಯಾ ಕೇಂದ್ರದಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದ ನಾಗರತ್ನ, ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೇನ್‌ಬೇರಿನವಳು ಎಂದು ಹೇಳಿಕೊಂಡಿದ್ದು, ಪ್ರದೀಪ್ ಅವರೊಂದಿಗೆ ವಿವಾಹದ ಕುರಿತು ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಆದರೆ ಪ್ರದೀಪ್ ಅವರು ತಮ್ಮ ಜಾತಿಯ ಯುವತಿಯನ್ನೇ ವಿವಾಹವಾಗುವುದಾಗಿ ತಿಳಿಸಿ ನಾಗರತ್ನ ಅವರ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದರು.
ಹಂತ ಹಂತವಾಗಿ 42,97,350 ವರ್ಗಾವಣೆ!
ವಿವಾಹ ಪ್ರಸ್ತಾಪ ನಿರಾಕರಿಸಿದ ನಂತರವೂ ನಾಗರತ್ನ ಅವರು ಪ್ರದೀಪ್ ಅವರಿಗೆ ನಿರಂತರವಾಗಿ ದೂರವಾಣಿ ಕರೆ ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದರು. ಬಳಿಕ ತಮ್ಮ ವೈಯಕ್ತಿಕ ಕಷ್ಟಗಳನ್ನು ಹೇಳಿಕೊಂಡು ಹಣಕಾಸಿನ ನೆರವು ಕೇಳಲಾರಂಭಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ನಾಗರತ್ನ ಅವರು ತಮ್ಮ ಬ್ಯಾಂಕ್ ಖಾತೆಯ ಜೊತೆಗೆ, ತಾವು ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯ ಸಹೋದ್ಯೋಗಿ ಹೇಮಂತ್ ಕರ್ಕೇರಾ, ಚಿಕ್ಕಮ್ಮನ ಮಗ ಪ್ರಮೋದ್ ಹಾಗೂ ಅಕ್ಕ ರೇಣುಕಾ ಅವರ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾಯಿಸುವಂತೆ ಮಾಡಿದ್ದರು ಎಂದು ಆರೋಪಿಸಲಾಗಿದೆ. 2024ರ ಜನವರಿಯಿಂದ 2026ರ ಜನವರಿವರೆಗಿನ ಅವಧಿಯಲ್ಲಿ ಪ್ರದೀಪ್ ಅವರಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 42,97,350 ಹಣವನ್ನು ಬೆದರಿಕೆಯ ಮೂಲಕ ವರ್ಗಾಯಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಣ ವಾಪಸ್ ಕೇಳಿದರೆ ಬೆದರಿಕೆ:
ಪ್ರದೀಪ್ ಅವರು ನೀಡಿದ ಹಣವನ್ನು ವಾಪಸ್ ಕೇಳಿದಾಗ, ನಾಗರತ್ನ ಅವರು ತಮ್ಮಿಬ್ಬರ ನಡುವೆ ಅಕ್ರಮ ಸಂಬಂಧವಿದೆ ಎಂದು ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಪ್ರದೀಪ್ ಕೆಲಸ ಮಾಡುತ್ತಿರುವ ಉಡುಪಿಯ ಸಹಕಾರಿ ಸಂಘದ ಕಚೇರಿಗೆ ತೆರಳಿ ಸಿಬ್ಬಂದಿ ಹಾಗೂ ಗ್ರಾಹಕರ ಎದುರು ಮಾನಹಾನಿ ಮಾಡುವುದಾಗಿ, ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಮತ್ತು ಪ್ರದೀಪ್ ಅವರು ಸಹಕಾರಿ ಸಂಘದ ಹಣವನ್ನು ದುರುಪಯೋಗಪಡಿಸಿಕೊಂಡು ಮೋಸ ಹಾಗೂ ವಂಚನೆ ಮಾಡುತ್ತಿದ್ದಾರೆ ಎಂದು ಸಂಸ್ಥೆಯ ಮುಂದೆ ಆರೋಪಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಸಂಸ್ಥೆಯ ಕಚೇರಿಯ ಮುಂದೆ ಬಂದು ಸುಳ್ಳು ಪತ್ರ ಬರೆದಿಟ್ಟು, ಮೈಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ದೂರವಾಣಿ ಮೂಲಕ ಬೆದರಿಕೆ ಹಾಕಿರುವುದಾಗಿ ಪ್ರದೀಪ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ದೂರು ನೀಡಿ. ನಾಗರತ್ನ ಹೆಚ್., ಹೇಮಂತ್ ಕರ್ಕೇರಾ, ಪ್ರಮೋದ್ ಹಾಗೂ ರೇಣುಕಾ ಅವರು ಉದ್ದೇಶಪೂರ್ವಕವಾಗಿ ಸಂಘಟಿತರಾಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದು, ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಪ್ರದೀಪ್ ಆರೋಪಿಸಿದ್ದಾರೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 135/2026ರಂತೆ ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿ ಪೊಲೀಸರ ಕಾರ್ಯಾಚರಣೆ:
ಪ್ರಕರಣದ ಆರೋಪಿಗಳ ಪತ್ತೆಗಾಗಿ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತಂಡದಲ್ಲಿ ಪಿಎಸ್‌ಐ ಭರತೇಶ್ ಕಂಕಣವಾಡಿ (ಕಾನೂನು ಮತ್ತು ಸುವ್ಯವಸ್ಥೆ), ಪಿಎಸ್‌ಐ ರತ್ನಾಕರ ಕೆ. (ತನಿಖೆ–2), ಹೆಡ್ ಕಾನ್‌ಸ್ಟೆಬಲ್‌ಗಳಾದ ಪ್ರಸನ್ನ ಸಿ., ಜೀವನ್ ಕುಮಾರ್, ಜಗನ್ನಾಥ ನಾಯ್ಕ, ಪೊಲೀಸ್ ಕಾನ್‌ಸ್ಟೆಬಲ್ ಹೇಮಂತ್ ಕುಮಾರ್ ಹಾಗೂ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸವಿತಾ ಭಾಗವಹಿಸಿದ್ದರು.
ವಿಶೇಷ ತಂಡವು ಅಕ್ಟೋಬರ್ 26, 2026ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬಸವೇಶ್ವರ ನಗರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ನಾಗರತ್ನ ಹೆಚ್. (42) ಮತ್ತು ಹೇಮಂತ್ (41) ಅವರನ್ನು ವಶಕ್ಕೆ ಪಡೆದಿದೆ. ಬಳಿಕ ಇಬ್ಬರನ್ನೂ ತನಿಖಾಧಿಕಾರಿಯ ಮುಂದೆ ಹಾಜರುಪಡಿಸಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಬಂಧಿತ ನಾಗರತ್ನ ಹಾಗೂ ಹೇಮಂತ್ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.

















