ಗಂಗೊಳ್ಳಿ: ಸ್ವಾಮಿ ವಿವೇಕಾನಂದರು ಬಿಟ್ಟು ಹೋದ ಆದರ್ಶಗಳು, ಚಿಂತನೆಗಳಿಂದ ವಿಶ್ವದಲ್ಲಿಯೇ ಓರ್ವ ಮಹಾನ್ ಪುರುಷರಾಗಿ ಗುರುತಿಸಲ್ಪಡುತ್ತಿದ್ದಾರೆ. ಹಿಂದು ಧರ್ಮವನ್ನು ಜಗತ್ತಿಗೇ ಸಾರುವ ಕೈಂಕರ್ಯವನ್ನು ಮಾಡುತ್ತಿದ್ದ ವಿವೇಕಾನಂದರಿಗೆ ಹಿಂದು ಧರ್ಮದ ಬಗ್ಗೆ ಅಪಾರ ಪ್ರೀತಿ ಕಾಳಜಿ ಇದ್ದಿತ್ತು. ಹಿಂದು ಧರ್ಮದ ಉನ್ನತಿಗಾಗಿ ವಿಶ್ವದೆಲ್ಲೆಡೆ ಸಂಚಾರ ಮಾಡಿದ ನಮ್ಮ ದೇಶದ ಸ್ವಾಮೀ ವಿವೇಕಾನಂದರ ಜನ್ಮ ದಿನವನ್ನು ಆಚರಿಸಿ ಅವರಿಗೆ ಗೌರವ ಸಲ್ಲಿಸಬೇಕಾಗಿರುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು.
ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಕ್ರಾಂತಿ ವೀರರ ಅಭಿಮಾನಿ ಬಳಗದ ಆಶ್ರಯದಲ್ಲಿ ಜರಗಿದ ಸ್ವಾಮಿ ವಿವೇಕಾನಂದರ 153ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸ್ವಾಮಿ ವಿವೇಕಾನಂದ ಆದರ್ಶ ಚಿಂತನೆಗಳು ನಮ್ಮ ಯುವ ಜನಾಂಗಕ್ಕೆ ಮಾದರಿಯಾಗಬೇಕು. ಅತಿ ಚಿಕ್ಕ ವಯಸ್ಸಿನಲ್ಲಿ ಇವರು ಚಿಕಾಗೋದಲ್ಲಿ ಮಾಡಿದ ಭಾಷಣ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಎಲ್ಲರಲ್ಲೂ ಸಹೋದರ ಸಹೋದರಿಯರ ಭಾವನೆಗಳನ್ನು ಬಿತ್ತಿದ ಇವರು ಯುವಜನತೆ ದೇಶದ ಭವಿಷ್ಯದ ನಿರ್ಮಾಪಕರು ಎಂದು ನಂಬಿ ತಮ್ಮ ಕನಸಿನ ಭಾರತದ ನಿರ್ಮಾಣದಲ್ಲಿ ಯುಶಕ್ತಿಯ ಪಾತ್ರವನ್ನು ಅತ್ಯಂತ ಪ್ರಭಾವಯುತವಾಗಿ ಬಿಂಬಿಸಿದ್ದರು. ಹೀಗಾಗಿ ಇಂದಿನ ಯುವಜನತೆಗೆ ಸ್ವಾಮಿ ವಿವೇಕಾನಂದರು ಬಹುದೊಡ್ಡ ಸ್ಫೂರ್ತಿ ಎಂದು ಅವರು ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಹಾಗೂ ಗಂಗೊಳ್ಳಿಯ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಸತೀಶ ಜಿ. ಶುಭ ಹಾರೈಸಿದರು. ಇದೇ ಸಂದರ್ಭ ನಿವೃತ್ತ ಪಶು ವೈದ್ಯಾಧಿಕಾರಿ ಡಾ.ಶಿವಾನಂದ ಅವರನ್ನು ಸನ್ಮಾನಿಸಲಾಯಿತು. ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಸವಿನೆನಪಿಗಾಗಿ ಮನೆಗೊಂದು ಮರ ಅಭಿಯಾನದ ಅಂಗವಾಗಿ ಸಾರ್ವಜನಿಕರು ಸಸಿಗಳನ್ನು ವಿತರಿಸಲಾಯಿತು. ಗೋಪಾಡಿ ಹೂವಿನಕೆರೆಯ ಗೋಸಂರಕ್ಷಣಾ ಸಮಿತಿ ಅಧ್ಯಕ್ಷ ಗಿರೀಶ ಉಪಾಧ್ಯಾಯ ಉಪಸ್ಥಿತರಿದ್ದರು.
ಕ್ರಾಂತಿ ವೀರರ ಅಭಿಮಾನಿ ಬಳಗದ ಗೌತಮ್ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗಂಗೊಳ್ಳಿಯ ಪೋರ್ಟ್ ಆಫೀಸಿನ ಬಳಿಯಿಂದ ಶ್ರೀ ವೀರೇಶ್ವರ ದೇವಸ್ಥಾನದ ವರೆಗೆ ಶೋಭಾಯಾತ್ರೆ ನಡೆಯಿತು.