ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಪ್ಲವಂಗ ನಾಮ ಸಂವತ್ಸರದ ’ವಸಂತೋತ್ಸವ’2027 ಕುಂದಾಪುರದ ಇತಿಹಾಸ ಪ್ರಸಿದ್ಧ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ.
ಈ ಸಂಬಂಧ 2027ರ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ದೇವಾಲಯದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿವೆ.
ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ವಾರಾಣಾಸಿ ಶ್ರೀ ಕಾಶೀ ಮಠದಲ್ಲಿ ’ವಸಂತೋತ್ಸವ’ 2027 ಆಹ್ವಾನ ಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದ್ದಾರೆ.
ಶ್ರೀ ಕಾಶೀ ಮಠಾಧೀಶರು ಎಪ್ರಿಲ್ 1ರಂದು ಕುಂದಾಪುರಕ್ಕೆ ಚಿತ್ತೈಸಲಿದ್ದಾರೆ. ಎಪ್ರಿಲ್ 7ರ ಯುಗಾದಿ ದಿನದಿಂದ ’ವಸಂತೋತ್ಸವ’ ಆಚರಣೆ ಆರಂಭವಾಗಲಿದೆ. ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ ಎಪ್ರಿಲ್ 15, ಶ್ರೀರಾಮ ನವಮಿಯಂದು ನಡೆಯಲಿದ್ದು, ಈ ಸಂಬಂಧ ಎಪ್ರಿಲ್ 11 ರಿಂದ 16ರ ತನಕ ನಡೆಯುವ ಉತ್ಸವಗಳು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನಡೆಯಲಿವೆ.
ಸಹಸ್ರ ಕಂಭಾಭಿಷೇಕ: ವಸಂತೋತ್ಸವ ಪರ್ವ ಕಾಲದಲ್ಲಿ ಶ್ರೀ ದೇವರ ಪ್ರಿತ್ಯರ್ಥವಾಗಿ, ಲೋಕ ಕಲ್ಯಾಣಾರ್ಥ ಸಹಸ್ರ ಕುಂಭಾಭಿಷೇಕ 29/04/2027 ರಂದು ಶ್ರೀ ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.
ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ವಸಂತ ಮಾಸ ಸಮಿತಿ ಗೌರವಾಧ್ಯಕ್ಷ ಕೆ. ರಾಧಾಕೃಷ್ಣ ಶೆಣೈ, ವಸಂತ ಮಾಸ ಸಮಿತಿ ಗೌರವಾಧ್ಯಕ್ಷ ಡಾ| ಪಿ. ದಯಾನಂದ ಪೈ, ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸ ಪ್ರಭು., ಕಾರ್ಯದರ್ಶಿ ಕೆ. ಪದ್ಮನಾಭ ಶೆಣೈ., ಕೋಶಾಧಿಕಾರಿ ಕೆ. ರಾಮಚಂದ್ರ ಕಾಮತ್., ದೇವಸ್ಥಾನದ ಜೊತೆ ಮೊಕ್ತೇಸರರಾದ ಹೆಚ್. ಜನಾರ್ದನ ಮಲ್ಯ., ಪಿ. ತ್ರಿವಿಕ್ರಮ್ ಪೈ., ದೇವಸ್ಥಾನದ ಹತ್ತು ಸಮಸ್ತರು ಹಾಗೂ ಗಣ್ಯ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ವಸಂತ ಮಾಸ ಸಮಿತಿ ರಚಿಸಲಾಗಿದೆ. ಎರಡು ತಿಂಗಳ ವಸಂತೋತ್ಸವದಲ್ಲಿ ದೇಶದ ಸರ್ವ ಸಮಾಜ ಬಾಂಧವರು ಪಾಲ್ಗೊಳ್ಳಬೇಕೆಂದು ವಸಂತ ಮಾಸ ಸಮಿತಿ ವಿನಂತಿಸಿದೆ.

















