ನರೇಂದ್ರ ಎಸ್ ಗಂಗೊಳ್ಳಿ.
ಕೆಲವು ಕತೆಗಳು ಹಾಗೆಯೆ. ಬರೆದವರು ಯಾರು? ಹೇಳಿದವರು ಯಾರು? ಏನೊಂದು ಗೊತ್ತಿರುವುದಿಲ್ಲ. ಆದರೆ ತನ್ನ ಒಡಲ ತುಂಬಾ ಸ್ವಾರಸ್ಯವನ್ನು ತುಂಬಿಕೊಂಡು ಅರ್ಥಗರ್ಭಿತವಾಗಿ ನೀತಿ ಭೋಧಕವಾಗಿ ಇಂಟರನೆಟ್ಟು ಮೊಬೈಲು ಪತ್ರಿಕೆ ಮೊದಲಾದ ಮಾಧ್ಯಮಗಳಲ್ಲಿ ಸದಾಕಾಲ ಹರಿದಾಡುತ್ತಿರುತ್ತವೆ. ಮತ್ತು ಅವು ತಮ್ಮ ಅರ್ಥಪೂರ್ಣ ಧ್ವನಿ ಮತ್ತು ಪ್ರಸ್ತುತತೆಯಿಂದಾಗಿ ಎಲ್ಲರಿಗೂ ಇಷ್ಟವಾಗುತ್ತವೆ. ಅಂತರ್ಜಾಲದಿಂದ ಸೋಸಿ ಬರೆದ ಅಂತಹ ಸುಂದರವಾದ ಜೀವನ ಮೌಲ್ಯಗಳನ್ನು ಭೋಧಿಸುವ ಮೂರು ಕತೆಗಳು ಈ ಬಾರಿ ನಿಮಗಾಗಿ.
ಹುಡುಗ ಮತ್ತು ಕೆಲಸ
ಅದೊಂದು ಸಂಜೆ ಒಂದು ಸಣ್ಣಗಿನ ಹುಡುಗನೊಬ್ಬ ಟೆಲಿಫೋನ್ ಬೂತ್ ಒಂದಕ್ಕೆ ಬಂದು ಅಲ್ಲಿಯೇ ಕ್ಯಾಶ್ ಕೌಂಟರಿನ ಪಕ್ಕದಲ್ಲಿ ಇರಿಸಲಾಗಿದ್ದ ಟೆಲಿಫೋನ್ ನಲ್ಲಿ ಒಂದು ನಂಬರಿಗೆ ಡಯಲ್ ಮಾಡಿದ. ಹುಡುಗನ ಚುರುಕುತನವನ್ನು ಗಮನಿಸಿದ ಬೂತ್‌ನ ಯಜಮಾನ ಆ ಹುಡುಗ ಏನು ಮಾತನಾಡುತ್ತಾನೆ ಎನ್ನುವುದನ್ನು ಕುತೂಹಲದಿಂದ ಆಲಿಸತೊಡಗಿದ.
ಹುಡುಗ : ಹಲೋ ನಮಸ್ತೆ ಮೇಡಂ. ನಾನು ಒಬ್ಬ ಕೂಲಿ ಮಾಡುವ ಹುಡುಗ. ನನಗೆ ನಿಮ್ಮ ಮನೆಯ ತೋಟದಲ್ಲಿ ಹುಲ್ಲುಕತ್ತರಿಸುವ ಕೆಲಸವನ್ನು ಕೊಡುವಿರಾ?
ಮಹಿಳೆ (ಆ ಕಡೆಯಿಂದ ಫೋನಿನಲ್ಲಿ) : ಇಲ್ಲ ಮಗು. ಆ ಕೆಲಸವನ್ನು ಮಾಡಲಿಕ್ಕೆ ಈಗಾಗಲೇ ಬೇರೆ ಒಬ್ಬರು ಇದ್ದಾರೆ.
ಹುಡುಗ ; ಮೇಡಂ ಈಗಿರುವ ವ್ಯಕ್ತಿ ಎಷ್ಟು ಸಂಬಳಕ್ಕೆ ಆ ಕೆಲಸ ಮಾಡುತ್ತಿದ್ದಾರೋ ಅದಕ್ಕಿಂತ ಅರ್ಧ ದರದಲ್ಲಿ ನಾನು ಅದೇ ಕೆಲಸವನ್ನು ನಿಮಗೆ ಮಾಡಿಕೊಡುತ್ತೇನೆ. ದಯವಿಟ್ಟು ಕೆಲಸ ಕೊಡಿ ಮೇಡಂ.
ಮಹಿಳೆ : ಇಲ್ಲ ಮಗೂ ಈಗ ಇರುವ ಹುಡುಗನ ಕೆಲಸ ನನಗೆ ತುಂಬಾ ಹಿಡಿಸಿದೆ. ಹಾಗಾಗಿ ನಿನಗೆ ಕೆಲಸ ಕೊಡಲು ಆಗುವುದಿಲ್ಲ.
ಹುಡುಗ (ದಯನೀಯವಾಗಿ) : ಮೇಡಂ ಬೇಕಾದರೆ ನಾನು ಆ ಕೆಲಸದ ಜೊತೆ ನಿಮ್ಮ ಮನೆ ಗುಡಿಸಿ ಒರೆಸುವ ಕೆಲಸವನ್ನು ಉಚಿತವಾಗಿ ಮಾಡಿಕೊಡುತ್ತೇನೆ.
ಮಹಿಳೆ : ಬೇಡ ಮಗು. ಧನ್ಯವಾದ.
ಹುಡುಗ ಸಂತೋಷದಿಂದ ನಗುತ್ತಾ ಫೋನಿನ ರಿಸೀವರ್ ಅನ್ನು ಕೆಳಗಿಟ್ಟ. ಇಬ್ಬರ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದ ಅಂಗಡಿಯಾತ ಹುಡುಗನಿಗೆ ಹೇಳಿದ. ಮಗು ಅವರು ಕೆಲಸ ಕೊಡುವುದಿಲ್ಲವೆಂದರೂ ಬೇಸರಿಸದೆ ನಗುತ್ತಿರುವ ನಿನ್ನ ಪಾಸಿಟಿವ್ ಸ್ಪಿರಿಟ್ ನನಗಿಷ್ಟವಾಯಿತು. ನೀನು ಬಯಸುವುದಾದರೆ ನಾನು ನಿನಗೆ ಕೆಲಸ ಕೊಡುತ್ತೇನೆ ಎಂದ.
ಹುಡುಗ : ಬೇಡ ಸರ್. ಧನ್ಯವಾದ.
ಅಂಗಡಿಯಾತ : ಆದರೆ ನೀನು ಕೆಲಸ ಬೇಕು ಅಂತ ಬೇಡಿಕೊಳ್ಳುತ್ತಿದ್ದೆಯಲ್ಲಾ..?
ಹುಡುಗ : ಇಲ್ಲ ಸರ್. ನಾನು ಕೇವಲ ನಾನು ಈಗ ಮಾಡುತ್ತಿರುವ ಹುಲ್ಲು ಕತ್ತರಿಸುವ ಕೆಲಸದಲ್ಲಿನ ನನ್ನ ನಿರ್ವಹಣೆಯನ್ನು ಪರೀಕ್ಷಿಸಿಕೊಳ್ಳುತ್ತಿದ್ದೆ. ನಾನು ಇಷ್ಟು ಹೊತ್ತು ಮಾತನಾಡಿದ್ದು ನಾನು ಈಗ ಕೆಲಸ ಮಾಡುತ್ತಿರುವ ಮನೆಯ ಮಾಲಕಿಯ ಜೊತೆಗೆ.
ಹುಡುಗ ನಗುತ್ತಾ ಹೊರಟು ಹೋದ. ಅಂಗಡಿಯಾತ ಅವಕ್ಕಾಗಿ ಹೋಗಿದ್ದ. ಸ್ವಯಂ ಮೌಲ್ಯಮಾಪನ ಎಂದರೆ ಇದೇ ಅಲ್ಲವಾ!
ನೀತಿ : ನಿಮ್ಮ ಕೆಲಸದಲ್ಲಿ ಉತ್ಕೃಷ್ಠವಾದುದನ್ನು ಕೊಡಿರಿ. ಜಗತ್ತು ನಿಮ್ಮ ಹಿಂದೆ ಬರುತ್ತದೆ.
***
ಮಾತು ಆಡಿದರೆ ಹೋಯಿತು…
ಒಂದು ಊರಲ್ಲಿ ಒಬ್ಬ ಮುದುಕ ತನ್ನ ನೆರೆಮನೆಯಲ್ಲಿ ವಾಸವಾಗಿದ್ದ ಒಬ್ಬ ವ್ಯಕ್ತಿಯ ಬಗೆಗೆ ಸುಮ್ಮನೆ ಎನ್ನುವಂತೆ ಆತ ದೊಡ್ಡ ಕಳ್ಳನೆಂದು ಮತ್ತು ಕದ್ದ ದುಡ್ಡಿನಲ್ಲೇ ಆ ವ್ಯಕ್ತಿ ಐಶಾರಾಮಿ ಜೀವನ ಸಾಗಿಸುತ್ತಿರುವನೆಂದು ಹೀಗೆ ಏನೇನೋ ಕೆಟ್ಟದಾಗಿ ಎಲ್ಲಾ ಕಡೆಯಲ್ಲೂ ಹೇಳಿಕೊಂಡು ಬರುತ್ತಿದ್ದ. ಅದರ ಪರಿಣಾಮವಾಗಿ ಆ ವ್ಯಕ್ತಿಯನ್ನು ಅದೊಂದು ದಿನ ಪೋಲಿಸರು ಬಂಧಿಸಿ ಜೈಲಿಗೆ ಹಾಕಿದರು. ಸ್ವಲ್ಪ ದಿನಗಳ ನಂತರ ಆ ವ್ಯಕ್ತಿ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಿ ಜೈಲಿನಿಂದ ಬಿಡುಗಡೆಯಾಗಿ ಬಂದ. ಹಾಗೆ ಬಂದವನೇ ತನ್ನ ಬಗೆಗೆ ಸುಮ್ಮನೆ ಇಲ್ಲಸಲ್ಲದ ಕಳ್ಳತನದ ಆರೋಪವನ್ನು ಹೊರಿಸಿದ್ದ ಮುದುಕನ ವಿರುದ್ಧ ಮಾನನಷ್ಟ ಮೊಕದ್ದೊಮೆಯನ್ನು ಹೂಡಿದ.
ಕೋರ್ಟಿನಲ್ಲಿ ನ್ಯಾಯಧೀಶರ ಮುಂದೆ ಮುದುಕ ಹೇಳಿದ. ಮಹಾಸ್ವಾಮಿ ಅವುಗಳು ಕೇವಲ ಮಾತುಗಳಾಗಿದ್ದವು. ಅದರಿಂದ ಯಾರಿಗೂ ನಷ್ಟವಾಗಲು ನೋವಾಗಲು ಸಾಧ್ಯವಿಲ್ಲ. ಅದಕ್ಕೆ ನ್ಯಾಯಧೀಶರು ಮುದುಕನಿಗೆ ಹೇಳಿದರು. ಸರಿ. ನೀವೊಂದು ಕೆಲಸ ಮಾಡಿ ನೀವು ಆ ವ್ಯಕ್ತಿಯ ಬಗೆಗೆ ಏನೇನೆಲ್ಲಾ ಕೆಟ್ಟ ಮಾತುಗಳನ್ನು ಆಡಿದ್ದೀರೋ ಅದನ್ನೆಲ್ಲಾ ಬಿಳಿ ಹಾಳೆಗಳಲ್ಲಿ ಬರೆದು ಎಲ್ಲವನ್ನು ಬೇರೆ ಬೇರೆಯಾಗಿ ಮನೆಗೆ ಹೋಗುವ ದಾರಿಯಲ್ಲಿ ಎಸೆಯುತ್ತಾ ಹೋಗಿ. ಮತ್ತೆ ನಾಳೆ ಬೆಳಿಗ್ಗೆ ಈ ವಿಚಾರಣೆಯ ತೀರ್ಪನ್ನು ಕೇಳಲು ಇಲ್ಲಿಗೆ ಬನ್ನಿ .ಮುದುಕ ಹಾಗೆ ಮಾಡಿದ ಮತ್ತು ಮರುದಿನ ಕೋರ್ಟಿಗೆ ಬಂದ.
ನ್ಯಾಯಧೀಶರೆಂದರು : ತೀರ್ಪು ಕೇಳುವ ಮುನ್ನ ನೀವೊಂದು ಕೆಲಸ ಮಾಡಬೇಕಿದೆ. ನಿನ್ನೆ ನೀವು ಮನಗೆ ಹೋಗುವ ದಾರಿಯಲ್ಲಿ ಎಸೆದ ಅಷ್ಟೂ ಕಾಗದಗಳನ್ನು ವಾಪಾಸು ತೆಗೆದುಕೊಂಡು ಬರಬೇಕು.
ಮದುಕ ಹೇಳಿದ: ಸರ್ ಅದು ನನ್ನಿಂದಾಗದು. ಅವೆಲ್ಲಾ ಈಗ ಎಲ್ಲೆಲ್ಲಿ ಹೋಗಿ ಬಿದ್ದಿವೆಯೋ ನನಗೇನು ಗೊತ್ತು? ಅವನ್ನು ಮರಳಿ ತರಲಿಕ್ಕೆ ಸಾಧ್ಯವಿಲ್ಲ.
ನ್ಯಾಯಧೀಶರು ನಗುತ್ತಾ ಹೇಳಿದರು : ನೀನು ಹೇಳಿದ್ದು ಸರಿ. ಹಾಗೆಯೇ ಒಂದು ಸಣ್ಣ ಮಾತು ಕೂಡ ಒಬ್ಬ ಮನುಷ್ಯನ ಗೌರವವನ್ನು ಮರಳಿ ತಂದುಕೊಡಲಾಗದಷ್ಟು ನಾಶಮಾಡಬಲ್ಲುದು. ನಿಮಗೆ ಬೇರೆಯವರ ಬಗೆಗೆ ಒಳ್ಳೆಯ ಮಾತುಗಳನ್ನಾಡಲು ಬರದಿದ್ದರೆ ದಯವಿಟ್ಟು ಸುಮ್ಮನಿದ್ದುಬಿಡಿ. ಆದರೆ ಕೆಟ್ಟ ಮಾತುಗಳನ್ನಾಡಲು ಹೋಗಬೇಡಿ.
ನೀತಿ: ನಾವು ನಮ್ಮ ಮಾತುಗಳ ಮಾಲೀಕರಾಗೋಣ. ಅದರ ದಾಸ್ಯ ಬೇಡ.
***
ನನಗೊಂದು ಸೇಬು ಕೊಡು
ಅವರಿಬ್ಬರೂ ಅಣ್ಣ ತಂಗಿ. ತಂಗಿಯೆಂದರೆ ಅಣ್ಣನಿಗೆ ಅಷ್ಟು ಪ್ರೀತಿ. ಅಪ್ಪ ಅಮ್ಮ ಅಥವಾ ಬೇರೆಯವರು ಏನನ್ನಾದರೂ ತಿನ್ನಲು ಕೊಟ್ಟರೆ ಅದರಲ್ಲಿ ತಂಗಿಗೆ ಪಾಲು ಕೊಡದೆ ಅಣ್ಣ ತಿನ್ನುತ್ತಿರಲಿಲ್ಲ. ಎಷ್ಟೋ ಸಲ ಪುಟ್ಟ ತಂಗಿ ರಂಪಾಟ ಮಾಡಿದಾಗೆಲ್ಲಾ ತನ್ನ ಪಾಲಿನ ತಿನಿಸನ್ನೂ ಅವಳಿಗೆ ಕೊಟ್ಟು ಅವಳನ್ನು ಸಮಧಾನಪಡಿಸುತ್ತಿದ್ದ. ತಂಗಿಗೂ ಅಣ್ಣನೆಂದರೆ ಅಪಾರ ಪ್ರೀತಿ ಇತ್ತು. ಅದೊಂದು ದಿನ ಮನೆಗೆ ಬಂದ ನೆಂಟರೊಬ್ಬರು ತಂಗಿಗೆಂದು ಒಂದಷ್ಟು ತಾಜಾ ಸೇಬುಗಳನ್ನು ಬುಟ್ಟಿ ಸಹಿತ ತಂದುಕೊಟ್ಟರು. ಆಗ ತಾನೇ ಮನೆಗೆ ಬಂದ ಅಣ್ಣ ಪುಟ್ಟ ತಂಗಿಯ ಬಳಿ ಸೇಬು ಹಣ್ಣುಗಳು ಇದ್ದುದನ್ನು ನೋಡಿ ತನಗೊಂದು ಕೊಡು ಎಂದು ಕೇಳಿದ. ತಂಗಿ ಅಣ್ಣನ ಮಾತನ್ನು ಕೇಳಿದವಳೆ ಬುಟ್ಟಿಯಿಂದ ಒಂದು ಸೇಬನ್ನು ತೆಗೆದುಕೊಂಡು ಕಚ್ಚಿ ಸ್ವಲ್ಪ ಭಾಗ ತಿಂದಳು.ಮತ್ತೆ ಅದನ್ನು ಹಾಗೆ ಬುಟ್ಟಿಯಲ್ಲಿ ಇಟ್ಟಳು. ಅಣ್ಣನಿಗೆ ಅಚ್ಚರಿಯಾಯಿತು. ಅಷ್ಟರಲ್ಲಿ ಅವಳು ಮತ್ತೊಂದು ಸೇಬನ್ನು ಕೂಡ ತೆಗೆದುಕೊಂಡು ಅದನ್ನು ಕೂಡ ಕಚ್ಚಿ ಹಾಗೆ ಕೆಳಗಿಟ್ಟಳು. ಅದನ್ನಾದರೂ ಕೊಡುವಳೆಂದು ಎಣಿಸಿದ್ದ ಅಣ್ಣನಿಗೆ ತೀರಾ ನಿರಾಸೆಯಾಯಿತು. ತಂಗಿ ಮತ್ತೊಂದು ಸೇಬನ್ನು ಕೂಡ ಹಾಗೆ ಮಾಡಿದಳು. ಎಂತಹ ತಂಗಿ ಇವಳು. ನಾನೆಷ್ಟು ಸಲ ಇವಳಿಗೆ ನನ್ನ ಪಾಲಿನ ತಿನಿಸನ್ನು ನೀಡಿದ್ದೇನೆ. ಆದರೆ ಅವಳಿಗೆ ಆ ಕೃತಜ್ಞತೆ ಇಲ್ಲ.ಈಗ ಒಂದು ಸೇಬು ಕೇಳಿದರೆ ನಾನು ತಿನ್ನ ಬಾರದೆಂದು ಎಲ್ಲವನ್ನೂ ಕಚ್ಚಿ ಕಚ್ಚಿ ಇಡುತ್ತಿದ್ದಾಳೆ ಎಂದು ತನ್ನಷ್ಟಕ್ಕೆ ತಾನೇ ಮನಸ್ಸಿನಲ್ಲಿ ಅಂದುಕೊಂಡ ಅಣ್ಣ ಬೇಸರದಿಂದ ತನ್ನ ಕೋಣೆಯೊಳಕ್ಕೆ ಹೋದ. ಸೆಕೆಂಡು ಕಳೆಯುವಷ್ಟರಲ್ಲಿ ಅಣ್ಣಾ ಎಂದು ಕರೆದ ತಂಗಿಯ ಧ್ವನಿಗೆ ತಿರುಗಿ ನೋಡಿದ. ಅವಳ ಕೈಯಲ್ಲಿ ಕಚ್ಚಿದ ಸೇಬಿತ್ತು. ಅಣ್ಣಾ ನೀನು ಸೇಬು ಕೇಳಿದೆಯಲ್ಲ. ನಿನಗಾಗಿ ತುಂಬಾ ಸಿಹಿಯಾಗಿರುವ ಸೇಬು ಹುಡುಕಿ ಕೊಡಬೇಕೆಂದುಕೊಂಡೆ.ಅದಕ್ಕೆ ಅವುಗಳನ್ನು ಕಚ್ಚಿ ನೋಡಿದೆ.ಅವೆಲ್ಲಾ ಸ್ವಲ್ಪ ಹುಳಿ ತರಹ ಇತ್ತು ಅಷ್ಟೇನೂ ಸಿಹಿಯಿರಲಿಲ್ಲ. ಈ ಸೇಬು ಮಾತ್ರ ತುಂಬಾ ಸಿಹಿಯಾಗಿದೆ ಅಣ್ಣ ತಗೋ ತಿನ್ನು ಎಂದವಳ ಮಾತಿಗೆ ಅವನ ಕಣ್ಣಲ್ಲಿ ನೀರು ತುಂಬುತಿತ್ತು.
ನೀತಿ: ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡಬೇಕು ಎನ್ನುವುದು ಇದಕ್ಕೆ. ಆತುರದಲ್ಲಿ ಅಥವಾ ಬೇಸರದಲ್ಲಿರುವಾಗ ಯಾವ ನಿರ್ಧಾರಕ್ಕೂ ಬರಬಾರದು.