ಕುಂದಾಪ್ರ ಡಾಟ್ ಕಾಂ ಲೇಖನ
ಕುಂದಾಪುರ: ವಾರಾಹಿ ಮತ್ತು ಕುಬ್ಜಾ ನದಿ ಕಾವ್ರಾಡಿ ಜಿಪಂ. ಕ್ಷೇತ್ರ ಬಳಸಿ ಹರಿದರೂ ಕುಡಿಯು ನೀರಿಗೂ ತತ್ವಾರ. ಅತೀ ಕೋಮು ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಿಕೊಂಡ ಕಂಡ್ಲೂರಿನಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳುವುದು ಹೊಸ ಜಿಪಂ.ಕ್ಷೇತ್ರ ಕಾವ್ರಾಡಿ ಮುಂದಿರುವ ದೊಡ್ಡ ಸವಾಲು.
ಕಾವ್ರಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ,ಬಿಜೆಪಿ ಹಾಗೂ ಸಿಪಿಎಂ ಪಕ್ಷದ ನಡುವೆ ತ್ರಿಕೋನ್ ಸ್ಪರ್ಧೆ ಏರ್ಪಟ್ಟಿದೆ. ಮಹಿಳಾ ಮೀಸಲಾತಿ ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜ್ಯೋತಿ ಎಂ. ಕಣದಲ್ಲಿದ್ದರೇ, ಬಿಜೆಪಿಯಿಂದ ಸುಶೀಲಾ ಹಾಗೂ ಸಿಪಿಎಂ ಪಕ್ಷದಿಂದ ಪೂರ್ಣಿಮಾ ಕಣದಲ್ಲಿದ್ದಾರೆ. ಸವಾಲಿನ ಕ್ಷೇತ್ರದಲ್ಲಿ ಮಹಿಳಾ ಮಣಿಯರು ಹೇಗೆ ಗೆದ್ದುಬರಲಿದ್ದಾರೆ ಎಂಬುದು ಕುತೂಹಲ.
ಕಾವ್ರಾಡಿ ಜಿಪಂ ಕ್ಷೇತ್ರದಲ್ಲಿ ಹೆಂಚು, ಡೆಕೋರೇಶನ್ ಟೈಲ್ಸ್, ಗೇರು ಬೀಜ ಕಾರ್ಖಾನೆಗಳಿದ್ದು, ಕಾವ್ರಾಡಿ ಕೈಗಾರಿಕಾ ಪ್ರದೇಶವೂ ಹೌದು. ಸ್ಥಳೀಯ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಕೀರ್ತಿ ಕೂಡಾ ಕಾವ್ರಾಡಿಗೆ ಸಲ್ಲುತ್ತದೆ. ಆದರೂ ಕಾವ್ರಾಡಿ ಜಿಪಂ. ಕೋಮು ಸಂಘರ್ಷ ಕಪ್ಪು ಚುಕ್ಕೆಯಂಡಿಸಿಕೊಂಡಿದೆ. ಚಿಕ್ಕಪುಟ್ಟ ಸಂಗತಿಗೂ ಇಲ್ಲಿ ಕೋಮು ಸಾಮರಸ್ಯ ಹದಗೆಡುತ್ತದೆ.
ಕ್ಷೀರ ಸಾಗರ ಭಟ್ಟರ ಮನೆಯಲ್ಲಿ ಮಜ್ಜಿಗೆಗೂ ತತ್ವಾರದ ಹಾಗೆ ಕಾವ್ರಾಡಿ ಜಿಪಂ ಸುತ್ತಿಬಳಸಿ ಕುಬ್ಜಾ ಮತ್ತು ವಾರಾಹಿ ನದಿ ಹರಿಯುತ್ತಿದ್ದರೂ ಕುಡಿಯುವ ನೀರು ಇಲ್ಲಿನ ದೊಡ್ಡ ಸಮಸ್ಯೆ. ಕುಂದಾಪುರ ಪುರಸಭೆ ಜಪ್ತಿ ಬಳಿ ಜಂಬೂ ನದಿಯಿಂದ ನೀರು ಪೂರೈಕೆ ಮಾಡಿಕೊಳ್ಳುವ ಮೂಲಕ ಕುಂದಾಪುರ ಪುರಸಭೆ ಸಹಿತ ನಾಲ್ಕಾರು ಗ್ರಾಪಂ ನೀರಿನ ದಾಹ ತಣಿಸಿದ್ದರೆ, ಕಾವ್ರಾಡಿ ಎರಡು ಹೊಳೆ ಹರಿದರೂ ಕುಡಿಯು ನೀರು ಸಮಸ್ಯೆ ಪರಿಹಾರಕ್ಕೆ ಬದ್ದತೆ ತೋರಲಿಲ್ಲ ಎಂಬದು ಇಲ್ಲಿನ ನಾಗರಿಕ ಆರೋಪ. ಕುಡಿಯುವ ನೀರು ಪೂರೈಕೆಗಾಗಿ ಬಾವಿಗೆ ಆದ್ಯತೆ ನೀಡಿ ನದಿ ಮರೆತಿರುವುದು ವಾಸ್ತವ ದುರಂತ.
ಕಾವ್ರಾಡಿ ಸಾರ್ಕಲ್ ಜನರು ಮಳೆಗಾದಲ್ಲಿ ದಿಗ್ಭಂಧನಕ್ಕೆ ಒಳಗಾಗುತ್ತಾರೆ. ಇಲ್ಲಿನ ಹೊಳೆಗೆ ದೋಣಿ ನೀಡುವಂತೆ ಜನ ಒತ್ತಾಯಿಸುತ್ತಿದ್ದರೂ ಇದುವರೆಗೆ ದೋಣಿ ಭಾಗ್ಯ ಸಿಕ್ಕಲ್ಲ. ಕಕುಂಜೆ ಅಂಪಾರು ಸಂಪರ್ಕ ರಸ್ತೆ ದೇವರಿಗೆ ಪ್ರೀತಿ. ಕುಕುಂಜೆ ಕಂಡ್ಲೂರು ಮೂಲಕ ಸಾರಿಗೆ ಸೌಲಭ್ಯ ನೀಡುವಂತೆ ಇಲ್ಲಿನ ಜನ ಒತ್ತಾಯಿಸಿದ್ದರೂ ಸಾರಿಗೆ ಸಂಪರ್ಕ ಮರೀಚಿಕೆ. ಒಟ್ಟಾರೆ ಕುಡಿಯುವ ನೀರು, ಸಂಪರ್ಕ ರಸ್ತೆ, ಬ್ರಿಜ್, ದಾರಿ ದೀಪ ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ.
ಸಮಸ್ಯೆ :
* ವಾರಾಹಿ, ಕುಬ್ಜಾ ಸಿಹಿನೀರಿನ ಹೊಳೆ ಹರಿದರೂ ಕುಡಿಯುವ ನೀರಿಗೆ ತತ್ವಾರ.
*ದಾರಿ ದೀಪ, ವಿದ್ಯುತ್ ಸಂಪರ್ಕ, ಸೌಕೂರು-ಕಂಡ್ಲೂರು ಸಂಪರ್ಕ ವ್ಯವಸ್ಥೆ ಕಾವ್ರಾಡಿ ಜಿಪಂ. ಮುಂದಿರುವ ಸವಾಲು.
*ಕಂಡ್ಲೂರು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಸೌಹಾರ್ದ ಜಿಪಂ. ಮುಂದಿರುವ ದೊಡ್ಡ ಸವಾಲು.
*ಲಂಗುಲಗಾಮಿಲ್ಲದ ಮರಳುಗಾರಿಕೆಗೆ ಹೊಳೆ ದಂಡೆ ಮುಚ್ಚು ನೆರೆಗೆ ನೀಡುತ್ತಿದೆ ಆಹ್ವಾನ.
*ಅತೀ ಹೆಚ್ಚು ಕೈಗಾರಿಕೆ ಇರುವ ಪ್ರದೇಶವಾಗಿದ್ದರೂ ಅರ್ಥಿಕ ಸದೃಡವಾಗದ ಕಾವ್ರಾಡಿ, ದೋಣಿಯಿಲ್ಲದ ಊರು, ಸಂಪರ್ಕ ರಹಿತ ಪ್ರದೇಶ ಇಲ್ಲಿನ ಮತ್ತೊಂದು ಸಮಸ್ಯೆ.
ಚುನಾವಣೆ ಕ್ಷೇತ್ರಗಳು: ತಲ್ಲೂರು, ಉಪ್ಪಿನಕುದ್ರು, ಕರ್ಕುಂಜೆ, ಗುಲ್ವಾಡಿ, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ಕಾವ್ರಾಡಿ, ಹಳ್ನಾಡು, ಅಂಪಾರು.
ಕಾಂಗ್ರೆಸ್ ಬೆಂಬಲಿತ : ಕಾವ್ರಾಡಿ, ಅಂಪಾರು
ಬಿಜೆಪಿ ಬೆಂಬಲಿತ : ಹಟ್ಟಿಯಂಗಡಿ, ತಲ್ಲೂರು, ಕರ್ಕುಂಜೆ, ಗುಲ್ವಾಡಿ