ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗಂಗೊಳ್ಳಿಯ ಕಳುವಿನ ಬಾಗಿಲು ಎಂಬಲ್ಲಿ ಮೈದುನ ಹಾಗೂ ಆತನ ಪತ್ನಿಯಿಂದ ಏಟಿಗೆ ಗಂಭೀರ ಗಾಯಗೊಂಡ ಮಹಿಳೆಯೋರ್ವಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಉಪ್ಪಿನಕುದ್ರು ನಿವಾಸಿ ವಿಜಯ ಖಾರ್ವಿಯ ಪತ್ನಿ ಜ್ಯೋತಿ ಖಾರ್ವಿ (26) ಮೃತ ಮಹಿಳೆ.
ಭಾನುವಾರ ಮಧ್ಯಾಹ್ನದ ವೇಳೆಗೆ ಮನೆಯಲ್ಲಿ ಯಾವುದೋ ಕಾರಣಕ್ಕೆ ಜ್ಯೋತಿ ಖಾರ್ವಿ, ಆಕೆಯ ಮೈದುನ ಗುರುರಾಘವೇಂದ್ರ ಖಾರ್ವಿ (26) ಮತ್ತು ಆತನ ಮಡದಿ ದಿವ್ಯಾಳ(19) ನಡುವೆ ಜಗಳ ನಡೆದಿತ್ತು. ಈ ವೇಳೆ ಜಗಳ ಹೊಡೆದಾಟಕ್ಕೆ ತಿರುಗಿ ಗುರು ಹಾಗೂ ದಿವ್ಯಾ ಇಬ್ಬರೂ ಸೇರಿ ಅತ್ತಿಗೆ ಜ್ಯೋತಿಯ ಹೊಟ್ಟೆಯ ಭಾಗಕ್ಕೆ ಸತತವಾಗಿ ಹೊಡೆದಿದ್ದಾರೆನ್ನಲಾಗಿದೆ. ಘಟನೆಯಿಂದ ತೀವ್ರ ಅಸ್ವಸ್ಥರಾದ ಜ್ಯೋತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಬೆಳಿಗ್ಗೆ 3:30ರ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೇ ಜ್ಯೋತಿ ಸಾವನ್ನಪ್ಪಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ
ಆಪಾದಿತ ಮೈದುನ ಹಾಗೂ ಆತನ ಪತ್ನಿಯನ್ನು ಬಂಧಿಸಿ ತನಿಕೆ ನಡೆಸಲಾಗುತ್ತಿದೆ. ಜ್ಯೋತಿ ಖಾರ್ವಿಯ ಪತಿ ಮೀನುಗಾರಿಕೆಗೆ ತೆರಳಿದ್ದು ಈ ವೇಳೆ ಮನೆಯಲ್ಲಿ ಇರಲಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಎಸೈ ಸುಬ್ಬಣ್ಣ ತೆರಳಿದ್ದರು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.