ಕುಂದಾಪುರ: ನಿವೃತ್ತ ಮುಖ್ಯ ಶಿಕ್ಷಕ ಕೊಗ್ಗ ಗಾಣಿಗ ಇವರಿಗೆ ಕರ್ನಾಟಕ ರಾಜ್ಯದ ಹಿರಿಯ ಸ್ಕೌಟರ್ ಪ್ರಶಸ್ತಿ ಲಭಿಸಿದ್ದು ರಾಜಭವನದಲ್ಲಿ ರಾಜ್ಯಪಾಲರಾದ ವಜುಬಾಯಿ ರೂಢಬಾಯಿ ವಾಲಾ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಬಿ.ಟಿ.ಜಯಚಂದ್ರ, ರಾಜ್ಯದ ಮುಖ್ಯ ಸ್ಕೌಟ್ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಉಪಸ್ಥಿತರಿದ್ದರು.
ಕೊಗ್ಗ ಗಾಣಿಗ ಅವರು 1979ರ ಅಕ್ಟೋಬರ್‌ನಲ್ಲಿ ಸ್ಕೌಟ್‌ನ ಪ್ರಾಥಮಿಕ ತರಬೇತಿ ಪಡೆದು, ನಿರಂತರವಾಗಿ ಪ್ರಗತಿಪರ ತರಬೇತಿ ಪಡೆದು (ಸ್ಕೌಟ್ ಉನ್ನತ ತರಬೇತಿ) ನಾಯಕ ತರಬೇತಿದಾರರಾಗಿದ್ದಾರೆ. ಇವರು ರಾಷ್ಟ್ರಮಟ್ಟದ ತರಬೇತಿದಾರರಾಗಿದ್ದು, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತರಬೇತಿ ಶಿಬಿರಗಳಲ್ಲಿ ತರಬೇತಿ ನೀಡಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲಾ ಸ್ಕೌಟ್‌ನ ತರಬೇತಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.