ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಘೋಷಣೆಯಾಗಿದ್ದ ಮೀಸಲಾತಿ ಮೊದಲು ಬಿಜೆಪಿಗೆ ಪರವಾಗಿಯೇ ಇದ್ದರೂ ಎರಡನೇ ಭಾರಿ ಅದು ಬದಲಾಗಿದ್ದರಿಂದ, ಬಹುಮತವಿರುವ ಬಿಜೆಪಿ ಪಕ್ಷಕ್ಕೆ ಈ ಭಾರಿಯೂ ಅಧ್ಯಕ್ಷ ಪಟ್ಟ ತಪ್ಪಿಹೋಗಿದೆ. ಮೊದಲ ಅವಧಿಯಲ್ಲಿ ಬಹುಮತವಿರುವ ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷಗಾದಿ ಏರಲು ಎಸ್ಸಿ ಬಿಸಿಎ ಮಹಿಳೆ ಇಲ್ಲದಿದ್ದ ಕಾರಣ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಸಿಪಿಎಂ ಪಕ್ಷದ ಕಲಾವತಿ ಯು.ಎಸ್. ಅವರಿಗೆ ಅಧ್ಯಕ್ಷ ಸ್ಥಾನ ನಿರಾಯಾಸವಾಗಿ ದಕ್ಕಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎ ಬಂದಿದ್ದರಿಂದ ಬಿಜೆಪಿ ನಾಗರಾಜ್ ಕಾಮಧೇನು ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.
ಎರಡನೇ ಅವಧಿಗೆ ಸಾಮಾನ್ಯ ಮೀಸಲು ಘೋಷಣೆಯಾಗಿ ಬಿಜೆಪಿ ಸದಸ್ಯರಿಗೆ ಅಧ್ಯಕ್ಷರಾಗುವ ಅವಕಾಶವಿತ್ತಾದರೂ, ದಿಢೀರ್ ಬದಲಾದ ಮೀಸಲಾತಿಯಿಂದ, ಬಿಸಿಎ ಮಹಿಳೆಗೆ ಅಧ್ಯಕ್ಷ ಸ್ಥಾನ ಒಲಿದಿದ್ದು, ಆ ಕೆಟಗೆರಿಯ ಸದಸ್ಯರನ್ನು ಹೊಂದಿರದ ಬಿಜೆಪಿಗೆ ಮತ್ತೊಮ್ಮೆ ನಿರಾಸೆ ಮೂಡಿದೆ. ಕಾಂಗ್ರೆಸ್ ತಮ್ಮ ಸದಸ್ಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮೀಸಲು ಬದಲಿಸಿತು ಎಂದು ಬಿಜೆಪಿ ಆರೋಪಿಸಿ, ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ನ್ಯಾಯಾಲಯ ಅರ್ಜಿ ವಜಾ ಮಾಡಿದ್ದರಿಂದ ಬಿಸಿಎ(ಮ) ಮೀಸಲು ದೊರೆಯುವುದು ಖಚಿತವಾಗಿದೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ಬಂದಿದ್ದರಿಂದ ಬಿಜೆಪಿ ಸದಸ್ಯರಾದ ರವಿರಾಜ್ ಖಾರ್ವಿ ಅಥವಾ ವಿಜಯ ಪೂಜಾರಿ ಇಬ್ಬರಲ್ಲಿ ಒಬ್ಬರು ಉಪಾಧ್ಯಕ್ಷರಾಗುವ ಸಾಧ್ಯತೆ ಇದೆ. ಮಾಚ್.22ರಂದು ಎರಡೂ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕುಂದಾಪ್ರ ಡಾಟ್ ಕಾಂ ವರದಿ.
ತಿರುಗೇಟು ನೀಡಲು ಬಿಜೆಪಿ ಕಾರ್ಯತಂತ್ರ :
ಕಾಂಗ್ರೆಸ್ ಮೀಸಲು ನೀತಿಗೆ ಬಿಜೆಪಿ ತಿರುಗೇಟು ನೀಡಲು ಸಜ್ಜಾಗಿ ನಿಂತಿದೆ. ಕಾಂಗ್ರೆಸ್ ಸದಸ್ಯರು ಅಧ್ಯಕ್ಷರಾಗುವುದನ್ನು ಬಿಜೆಪಿ ತಪ್ಪಿಸುವ ಸಲುವಾಗಿ ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷೆ ಕಮ್ಯನಿಸ್ಟ್ ಪಕ್ಷದ ಗುಣರತ್ನ ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ.
ಬಿಸಿಎ (ಮ) ಮೀಸಲು ಕಾಂಗ್ರೆಸ್ ಪಕ್ಷದ ನಾಲ್ವರು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿದ್ದು, ಪುಷ್ಪಾ ಶೇಟ್, ವಸಂತಿ ಸಾರಂಗ, ರವಿಕಲಾ ಗಣೇಶ್ ಶೇರಿಗಾರ್, ಶಕುಂತಲಾ ಅವರ ಹೆಸರು ಮುಂಚೂಣಿಯಲ್ಲಿದೆ. ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೆಣೆದ ಬಿಜೆಪಿ ಗುಣರತ್ನ ಅವರನ್ನು ಬೆಂಬಲಿಸುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ. ಬಿಜೆಪಿ 12 ಜನ ಸದಸ್ಯರು, ಶಾಸಕ, ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯರು ಮತದಾನ ಮಾಡುವ ಅವಕಾಶವಿದ್ದರಿಂದ ಗುಣರತ್ನ ಅನಾಯಾಸವಾಗಿ ಗೆಲ್ಲಲಿದ್ದಾರೆ ಎಂಬ ವಿಶ್ವಾಸವಿದೆ. ಕುಂದಾಪುರ ಪುರಸಭೆಯಲ್ಲಿ 12 ಬಿಜೆಪಿ, 9 ಕಾಂಗ್ರೆಸ್ ಮತ್ತು ಎರಡು ಕಮ್ಯುನಿಸ್ಟ್ ಸದಸ್ಯರಿದ್ದಾರೆ. ಚುನಾವಣೆ ಪೂರ್ವ ಕಾಂಗ್ರೆಸ್ ಕಮ್ಯುನಿಸ್ಟ್ ಚುನಾವಣೆ ಹೊಂದಾಣಿಕೆ ಮಾಡಿಕೊಂಡಿದ್ದು ಒಟ್ಟು ಸದಸ್ಯರ ಸಂಖ್ಯೆ 11 ಆಗಿದೆ.
ಬದಲಾದ ಮೀಸಲಿಂದ ಕಾಂಗ್ರೆಸ್ ತನ್ನ ಸದಸ್ಯರಿಗೆ ಅಧ್ಯಕ್ಷ ಪಟ್ಟ ಒಲಿಯುತ್ತದೆ ಎಂದು ಭಾವಿಸಿತ್ತು. ಕಾಂಗ್ರೆಸ್ ತನ್ನ ಪಕ್ಷದ ನಾಲ್ವರ ಮಹಿಳೆಯರನ್ನಷ್ಟೇ ಗುರಿಯಾಗಿರಿಸಿ ಕೊಂಡಿದ್ದು ಅವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಯತ್ನದಲ್ಲಿತ್ತು. ಈ ನಾಲ್ವರ ಹೆಸರಲ್ಲಿ ಗುಣರತ್ನ ಹೆಸರಿರಲಿಲ್ಲ. ಈ ಅವಕಾಶವನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಕಾಂಗ್ರೆಸ್ ಸೋಲಬೇಕು ಎಂದಾದರೆ ಬಿಜೆಪಿ ಗುಣರತ್ನ ಅವರನ್ನು ಬೆಂಬಲಿಸಿ ಪುರಸಭೆಯಲ್ಲಿ ತಮ್ಮ ಹಿಡಿತ ಸಾಧಿಸಿಕೊಳ್ಳಬೇಕು ಅಥವಾ ಮತ್ತೆ ಅಧ್ಯಕ್ಷಗಾದಿ ಪಡೆಯುವ ಹಂಬಲವಿದ್ದರೇ, ಕಾಂಗ್ರೆಸ್ ತಮ್ಮದೇ ಪಕ್ಷದ ನಾಲ್ವರು ಅಭ್ಯರ್ಥಿಗಳನ್ನು ಬಿಟ್ಟು ಕಾಂಗ್ರೆಸ್-ಸಿಪಿಎಂ ರಾಜಿ ಮುಂದುವರಿಸಿ ಗುಣರತ್ನ ಅವರನ್ನೇ ಬೆಂಬಲಿಸಬೇಕು. ಎರಡೂ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಗುಣರತ್ನ ಅವರ ನಿಲುವೇನು ಎಂಬುದು ಸದ್ಯದಲ್ಲಿಯೇ ತಿಳಿಯಲಿದೆ. ರಾಜಕೀಯದಲ್ಲಿ ಏನೂ ಆಗಬಹುದು ಬಿಡಿ.