ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮುಂದಿನ ವರ್ಷ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ ರೂ ೧೨೦ ಕೋಟಿ ಅನುದಾನದ ಪ್ರಸ್ತಾವನೆ ಸಲ್ಲಿಸಿದ್ದು, ಕನಿಷ್ಠ ರೂ 100 ಕೋಟಿ ದೊರೆಯುವ ಭರವಸೆ ಇದೆ. ಅದರಲ್ಲಿ ಕೊರಗರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾದ ಮೊತ್ತದಿಂದ ಅವರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಸಿ. ಬಸವರಾಜು ಹೇಳಿದರು.
ಅವರು ಮರವಂತೆಯ ಕೊರಗರ ಕಾಲನಿಗೆ ಭೇಟಿ ನಿಡಿದ್ದ ಸಂದರ್ಭದಲ್ಲಿ ಮಾತನಾಡಿದರು. ಕೊರಗರು ಶತಮಾನದಿಂದ ನೆಲಸಿದ್ದ ನಿವೇಶನವನ್ನು ಅದರ ಭೂಮಾಲೀಕರಿಂದ ಖರೀದಿಸಿ, ಕೊರಗ ಕುಟುಂಬಗಳಿಗೆ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಂಡ ಅವರನ್ನು ಮತ್ತು ಉಡುಪಿ ಜಿಲ್ಲಾ ವ್ಯವಸ್ಥಾಪಕ ದೇವರಾಜ್ ಅವರನ್ನು ಕೊರಗ ಸಮುದಾಯದವರು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಸನ್ಮಾನಿಸಿದರು.
ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ ವಿ. ಸ್ವಾಗತಿಸಿದರು. ಶೇಖರ ಮರವಂತೆ ನಿವೇಶನದ ಹಕ್ಕು ಪಡೆಯಲು 1998ರಿಂದ ನಡೆಸಿದ್ದ ಪ್ರಯತ್ನಗಳನ್ನು ವಿವರಿಸಿ, ನಿವೇಶನ ಖರೀದಿಗೆ ನಿಗಮ ನೀಡಿದ್ದ ನೆರವಿನಲ್ಲಿ ಅರ್ಧಾಂಶ ಸಾಲವಾಗಿದ್ದು ಇದನ್ನು ಮನ್ನಾ ಮಾಡಬೇಕೆಂದು ಮನವಿ ಸಲ್ಲಿಸಿದರು. ಉತ್ತರಿಸಿದ ಬಸವರಾಜು ರಾಜ್ಯ ಸರಕಾರ ಪರಿಶಿಷ್ಟ ಪಂಗಡದವರಿಗೆ ನೀಡಿದ್ದ ೯೬ ಕೋಟಿ ಮೊತ್ತದ ಸಾಲವನ್ನು ಮನ್ನಾ ಮಾಡಿರುವುದರಿಂದ ಇನ್ನೊಮ್ಮೆ ಸಾಲ ಮನ್ನಾ ಅಸಾಧ್ಯ. ಬದಲಾಗಿ ಮರವಂತೆಯ ಕೊರಗರಿಗೆ ಅನ್ಯ ನೆರವು ಒದಗಿಸುವ ಭರವಸೆಯಿತ್ತರು. ಗಣೇಶ ಬಾರ್ಕೂರು ವಂದಿಸಿದರು.
ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಬಾಲಾಜಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ, ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯೆ ಸುಗುಣಾ, ಮಾಜಿ ಅಧ್ಯಕ್ಷ ಎಸ್. ಜನಾರ್ದನ, ಮಾಜಿ ಸದಸ್ಯೆ ಗೌರಿ, ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್, ಲಕ್ಷ್ಮಣ ಬೈಂದೂರು, ಇತರರು ಉಪಸ್ಥಿತರಿದ್ದರು./