ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಣ ಓದು ಬರಹಗಳಿಂದ ಗಳಿಸುವ ಜ್ಞಾನಕ್ಕೆ, ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳಿಗೆ ಸೀಮಿತವಾಗಬಾರದು. ಅದು ಸಂಸ್ಕೃತಿಯನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣಾರ್ಥಿಗೆ ಜೀವನ ಮೌಲ್ಯವನ್ನು ಕಲಿಸಬೇಕು ಎಂದು ಕೋಟ ಪಡುಕೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ನಾಯಕ ಹೇಳಿದರು.
ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಶೈಕ್ಷಣಿಕ ಸಭೆಯಲ್ಲಿ ಅವರು ಅಮೃತ ನುಡಿ ಆಡಿದರು. ಪಟ್ಟಣಗಳಲ್ಲಿ, ಆಂಗ್ಲಭಾಷಾ ಮಾಧ್ಯಮದಲ್ಲಿ ಕಲಿತವರು ಮಾತ್ರ ವಿಶೇಷ ಸಾಧನೆ ಮಾಡುತ್ತಾರೆ ಎನ್ನುವುದು ಸತ್ಯವಲ್ಲ. ಹೆಚ್ಚಿನ ಸಾಧಕರು ಹಳ್ಳಿಗಳಿಂದ, ಮಾತೃಭಾಷಾ ಶಾಲೆಗಳಿಂದ ಬಂದಿದ್ದಾರೆ ಎಂದ ಅವರು ಗುಣಮಟ್ಟದ ಶಿಕ್ಷಣ ಸಾಧ್ಯ ಎನ್ನುವುದನ್ನು ಹಲವು ಮಾತೃಭಾಷಾ ಮಾಧ್ಯಮ ಶಾಲೆಗಳು ತೋರಿಸಿಕೊಟ್ಟಿವೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಸ್ವಾಗತಿಸಿದರು. ಖಂಬದಕೋಣೆಯ ಶಿಕ್ಷಣ ಸಂಯೋಜಕ ವೆಂಕಪ್ಪ ಉಪ್ಪಾರ, ನಾವುಂದ ಸಮೂಹ ಸಂಪನ್ಮೂಲ ವ್ಯಕ್ತಿ ಸುನಿಲ್ ಶೆಟ್ಟಿ ಶುಭ ಹಾರೈಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ತಮ್ಮ ತಂದೆ ರಾಮ ಪೂಜಾರಿ ಅವರ ನೆನಪಿಗಾಗಿ ಶಾಲೆಗೆ ನಿರ್ಮಿಸಿಕೊಟ್ಟ ಧ್ವಜಸ್ತಂಭವನ್ನು ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಪೂಜಾರಿ ಶಾಲಾ ಧ್ವಜ ಅರಳಿಸಿದರು. ಶಾಲೆಯ ಹಿಂದಿನ ಮುಖ್ಯೋಪಾಧ್ಯಾಯ ಮೋಹನದಾಸ ಎಸ್. ಉಪ್ಪುಂದ, ಗೋಪಾಲ ಶೇರಿಗಾರ್, ಪ್ರಭಾರ ಮುಖ್ಯ ಶಿಕ್ಷಕಿ ಸಾವಿತ್ರಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸರೋಜಾ ಶ್ಯಾನುಭಾಗ್, ಹಿಂದಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸೋಮಯ್ಯ ಬಿಲ್ಲವ, ಶೇಷಗಿರಿ ಆಚಾರ್, ಹಾಲಿ ಅಧ್ಯಕ್ಷ ಗಣೇಶ ಪೂಜಾರಿ, ಇನ್ಸ್ಪಾಯರ್ ಅವಾರ್ಡ್ ಪಡೆದ ವಿದ್ಯಾರ್ಥಿ ಆದಿತ್ಯ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದುವು. ಶಿಕ್ಷಕಿ ನಿರ್ಮಲಾ ಪಟಗಾರ್ ವಂದಿಸಿದರು. ಸೀತಾ ಜೋಗಿ ಮತ್ತು ಚೈತ್ರಾ ಶೆಟ್ಟಿ ನಿರೂಪಿಸಿದರು.
ಅಮೃತ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ಜನಾರ್ದನ, ಕೋಶಾಧಿಕಾರಿ ಅಣ್ಣಪ್ಪ ಖಾರ್ವಿ, ಆರ್ಥಿಕ ಸಮಿತಿ ಅಧ್ಯಕ್ಷ ಎಂ. ನರಸಿಂಹ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶೋಭಾ ದೇವಾಡಿಗ, ವಿದ್ಯಾರ್ಥಿ ನಾಯಕಿ ತೃಪ್ತಿ ವೇದಿಕೆಯಲ್ಲಿದ್ದರು.