ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪಂಚಾಯತ್ ರಾಜ್ ವ್ಯವಸ್ಥೆಗೆ ಈಗ ರಾಜ್ಯ ಮತ್ತು ಕೇಂದ್ರ ಸರಕಾರಗಳು ಬಹಳ ಒತ್ತು ನೀಡುತ್ತಿವೆ. ಹೆಚ್ಚು ಅಧಿಕಾರ, ಸಂಪನ್ಮೂಲ ಬರುತ್ತಿದೆ. ಅದರೊಂದಿಗೆ ಗ್ರಾಮದ ಜನರೇ ತಮ್ಮ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಳ್ಳಲು ಸಾಧ್ಯವಾಗುವ ’ನಮ್ಮ ಗ್ರಾಮ ನಮ್ಮ ಯೋಜನೆ’ ಚಾಲ್ತಿಗೆ ಬಂದಿದೆ. ಜನ ಪ್ರತಿನಿಧಿಗಳು, ಜನರು ಸೇರಿಕೊಂಡು ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಿಸಿದರೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳ್ಳುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಜಿ. ಪುತ್ರನ್ ಹೇಳಿದರು. ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪುರ ತಾಲೂಕು ಪಂಚಾಯತ್, ವಿವಿಧ ಸರಕಾರಿ ಇಲಾಖೆಗಳು ಮತ್ತು ತ್ರಾಸಿ, ಹೊಸಾಡು ಗ್ರಾಮ ಪಂಚಾಯತ್ ಸಂಯುಕ್ತವಾಗಿ ತ್ರಾಸಿಯ ಅಂಬೇಡ್ಕರ್ ಭವನದ ಎದುರು ಆಯೋಜಿಸಿದ್ದ ’ಗ್ರಾಮ ಉದಯ್ ಸೇ ಭಾರತ್ ಉದಯ್ ಅಭಿಯಾನ’ ಹಾಗೂ ’ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್’ ಆಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹೊಸಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಡಾ. ಬಿ. ಆರ್. ಅಂಬೇಡ್ಕರ್ ಅವರ ೧೨೫ನೆ ಜನ್ಮದಿನಾಚರಣೆ ಪ್ರಯುಕ್ತ ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ತ್ರಾಸಿ ಗ್ರಾಮ ಗ್ರಂಥಾಲಯ ಏರ್ಪಡಿಸಿದ್ದ ಪುಸ್ತಕ ಪ್ರದರ್ಶನವನ್ನು, ತಾಲೂಕು ಪಂಚಾಯತ್ ಸದಸ್ಯ ಕೆ. ನಾರಾಯಣ, ಕೃಷಿ ಉಪಕರಣಗಳ ಪ್ರದರ್ಶನವನ್ನು, ಉದ್ಘಾಟಿಸಿದರು.
ಪಂಚಾಯತ್ ರಾಜ್ ಪರಿಣತ ಎಸ್. ಜನಾರ್ದನ ಮರವಂತೆ ’ನಮ್ಮ ಗ್ರಾಮ ನಮ್ಮ ಯೋಜನೆ’ಯ ಸ್ಥೂಲ ಮಾಹಿತಿ ನೀಡಿದರು. ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳು ಇಲಾಖೆಯ ಅಧೀನದ ಯೋಜನೆಗಳ ವಿವರ ನೀಡಿದರು. ತ್ರಾಸಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜೀತಾ ಡಿಸೋಜ, ಹೊಸಾಡು ಉಪಾಧ್ಯಕ್ಷೆ ವಂದನಾ ಖಾರ್ವಿ, ಮಾರ್ಗದರ್ಶಿ ಅಧಿಕಾರಿ ಕುಂದಾಪುರದ ಸಹಾಯಕ ಕೃಷಿ ನಿರ್ದೇಶಕ ಬಿ. ವಿ. ವಿಠಲ ರಾವ್, ಉಭಯ ಪಂಚಾಯತ್‌ಗಳ ಸದಸ್ಯರು ವೇದಿಕೆಯಲ್ಲಿದ್ದರು. ಅಭಿವೃದ್ಧಿ ಅಧಿಕಾರಿ ಶೋಭಾ ಸ್ವಾಗತಿಸಿ ನಿರೂಪಿಸಿದರು. ಶೇಖರ ಮರವಂತೆ ಸಹಕರಿಸಿದರು.
ಬೆಳಿಗ್ಗೆ ಕೊರಗರ ಸಾಂಪ್ರದಾಯಿಕ ವಾದನದ ಜತೆಗೆ ನಡೆದ ಜಾಗೃತಿ ಜಾಥಾವನ್ನು ತಾಲೂಕು ಪಂಚಾಯಿತಿ ಸದಸ್ಯ ರಾಜು ದೇವಾಡಿಗ ಉದ್ಘಾಟಿಸಿದ್ದರು. ರಂಗೋಲಿ, ಕ್ಲೇ ಮಾಡೆಲಿಂಗ್, ಬುಟ್ಟಿ ಹೆಣಿಗೆ, ಅಂಬೇಡ್ಕರ್ ಚಿತ್ರ ರಚನೆ, ಕ್ರೀಡಾ ಸ್ಪರ್ಧೆ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆರೋಗ್ಯ ತಪಾಸಣೆ, ಅಂಗನವಾಡಿ, ಶಾಲೆಗಳ ಮಕ್ಕಳಿಂದ ನೃತ್ಯ, ಸಮೂಹ ಗಾನ, ಪ್ರಹಸನ ನಡೆದುವು.